Connect with us

Bengaluru City

ಸಿಎಂ ಹಸಿರು ಶಾಲು ಹಾಕ್ತಾರೆ, ರಾಜ್ಯದಲ್ಲಿ ರೈತರ ಕೊಲೆ ಆಗ್ತಿದೆ-ಅನ್ನದಾತರ ರಣಕಹಳೆ

Published

on

-ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆ ವಿರುದ್ಧ ರೈತರ ಸಮರ
-ಕೇಂದ್ರ ಸರ್ಕಾರದ ವಿರುದ್ಧ ನೇಗಿಲಯೋಗಿಯ ಕೂಗು
-ಕೊರೊನಾಗೆ ಹೆದರಲ್ಲ, ನ್ಯಾಯ ನಮಗೆ ಬೇಕು

ಬೆಂಗಳೂರು: ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ಅಧಿವೇಶನದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿರುವ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಸದನದಲ್ಲಿ ಮೂರು ಕಾಯ್ದೆಗಳನ್ನ ಕೈ ಬಿಡುವಂತೆ ರೈತ ಸಂಘಟನೆಗಳು ಆಗ್ರಹಿಸಿವೆ.

ರೈತ, ಕಾರ್ಮಿಕ, ದಲಿತ ಸಂಘಟನೆ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳಿಂದ ಬೃಹತ್ ರ‌್ಯಾಲಿ ಆರಂಭಿಸಲಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಇಬ್ಬರೂ ಮುಖಂಡರ ನಡುವೆ ಒಗ್ಗಟ್ಟು ಕಾಣಿಸುತ್ತಿಲ್ಲ. ವಿವಿಧ ಸಂಘಟನೆಗಳ ಬ್ಯಾನರ್ ಹಿಡಿದುಕೊಂಡಿರುವ ರೈತರ ಅಧಿವೇಶನ ಮುಗಿಯುವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕಿನವರೆಗೂ ರೈತರು ರ‌್ಯಾಲಿ ಹೊರಟ್ಟಿದ್ದು, ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ 500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿದೆ.

ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ತನಕ ಹೋರಾಟ ನಡೆಯಲಿದ್ದು, ಯಾವುದೇ ಕಾರಣಕ್ಕೂ ವಿಧಾನಸೌಧ ಮುತ್ತಿಗೆ ಇಲ್ಲ. ಶಾಂತಿಯುತವಾಗಿ ಜನತಾ ಸಂಸತ್ ಹೋರಾಟ ನಡೆಯಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಮತೋರ್ವ ರೈತ ಮುಖಂಡ ಚಾಮರಸ ಪಾಟೀಲ್, ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಪರ ಅಂತಾರೆ. ಆದ್ರೆ ರಾಜ್ಯದಲ್ಲಿ ರೈತರ ಕೊಲೆ ಆಗುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ರೈತರು ಬೀದಿಗೆ ತಂದಿದೆ. ನಾವು ಸರ್ಕಾರವನ್ನು ಬೀದಿಗೆ ತರ್ತಿವಿ. ರೈತರ ಮಕ್ಕಳು ನಾವ್ ಅಂತಾರೆ. ನೀವೇ ಕೇಳಿಕೊಳ್ಳಿ ಸುಗ್ರೀವಾಜ್ಞೆ ಮಾರಕವಾಗಿದೆ. ಅಹೋ ರಾತ್ರಿ ಧರಣಿ ಮಾಡುತ್ತೇವೆ. ಈಗ ವಿಧಾನಸೌಧ ಮುತ್ತಿಗೆ ಹಾಕಿ ಬೀದಿಗೆ ತರುತ್ತೇವೆ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *