Wednesday, 19th February 2020

Recent News

ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿದ ನದಿಗಳಲ್ಲಿ ತುಂಗಭದ್ರಾ ನದಿ ಕೂಡ ಒಂದು. ಆದರೆ ನದಿ ಮೈತುಂಬಿ ಹರಿಯುತ್ತಿದ್ದರೂ ಕಾಲುವೆಗೆ ಮಾತ್ರ ನೀರಿಲ್ಲ. ಜಲಾಶಯದಿಂದ ಟಿಎಲ್‍ಬಿಸಿ ಕೆಳಭಾಗದ ಕಾಲುವೆಗೆ ಸಮರ್ಪಕ ನೀರು ದೊರೆಯುತ್ತಿಲ್ಲ.

ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿದೆ. ತಾಲೂಕಿನ ಮೇಲ್ಭಾಗದಲ್ಲಿ ನಾಲೆಯಿಂದ ಅಕ್ರಮವಾಗಿ ನದಿ ನೀರು ಬಳಕೆ ಮಾಡುತ್ತಿದ್ದ ಹಿನ್ನೆಲೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಟಿಎಲ್‍ಬಿಸಿ ಕಾಲುವೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೇದಮೂರ್ತಿ ಅವರು ಉಪಕಾಲುವೆ ಹಾಗೂ ಕೆಳಭಾಗದ ನಾಲೆಗೆ ಹರಿಯುವ ನೀರಿನ ಗೇಜ್ ಪರಿಶೀಲನೆ ಮಾಡಿ, ಕೆಳಭಾಗದ ನಾಲೆಗೆ ನೀರು ಹರಿಸಿದ್ದರು.

ಆದರೆ ಹೆಚ್ಚು ನೀರು ಹರಿಯುತ್ತಿದ್ದ ಕಾರಣಕ್ಕೆ 37 ಮತ್ತು 38ನೇ ಡಿಸ್ಟ್ರಿಬ್ಯೂಟರ್ ನೀರಿನ ಪ್ರಮಾಣ ಇಳಿಕೆ ಮಾಡಲಾಗಿದೆ. ಇದರಿಂದ ಕಾಲುವೆಯಲ್ಲಿ ನೀರು ಇಲ್ಲದಂತಾಗಿದೆ. ಮೊದಲೇ ಪ್ರವಾಹದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರವಾಹ ಬಂದಾಗ ನೀರಿನಲ್ಲಿ ಬೆಳೆ ಕೊಳೆತು ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದ ರೈತರು, ಈಗ ಬೆಳೆಗೆ ಪೂರಕ ನೀರು ಸಿಗುತ್ತಿಲ್ಲ ಎಂದು ಕಂಗಾಲಾಗಿ ಕೂತಿದ್ದಾರೆ.

ಆದ್ದರಿಂದ ಒಣಗಿರುವ ಕಾಲುವೆಗೆ ಅಧಿಕಾರಿಗಳು ನದಿ ನೀರು ಹರಿಸಿದರೆ ಬೆಳೆಗೆ ಅನುಕೂಲವಾಗುತ್ತದೆ. ದಯಮಾಡಿ ಕಾಲುವೆಗೆ ನೀರು ಹರಿಸಿ ಬೆಳೆಯನ್ನು ಉಳಿಸಿ ಎಂದು ರೈತರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *