Connect with us

Bengaluru City

ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ- ನೂರಾರು ವರ್ಷದ ಕೆರೆ ಉಳಿಸಲು ಸೂಚನೆ

Published

on

– ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗ್ರಾಮಸ್ಥರು

ಬೆಂಗಳೂರು: ನೂರಾರು ವರ್ಷದ ಹಳೆಯ ಕೆರೆ ಉಳಿಸುವಂತೆ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಕಾರ್ಯಾಲಯ ಸಹ ಪ್ರತಿಕ್ರಿಯಿಸಿ, ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದೆ.

ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ಮಾದಾವರ ಕೆರೆಯ ಕಥೆ-ವ್ಯಥೆ ಇದಾಗಿದ್ದು, ಕೆರೆ ಉಳಿಸುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಸ್ಥಳೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ಉತ್ತಮ ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಸಾವಿರಾರು ರೈತ ಕುಟುಂಬಕ್ಕೆ ಅನುಕೂಲವಾಗಿದೆ. ಆದರೆ ಕೆರೆ ಉಳಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೋರಾಟಗಾರ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಹೋರಾಟಗಾರ ರಾಮಕೃಷ್ಣಯ್ಯಗೆ ಸ್ಥಳೀಯರು ಸಾಥ್ ನೀಡಿ ಕೆರೆ ಬಳಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು, ತಹಶಿಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಅಲೆದು ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಜಿಂದಾಲ್ ಕಂಪನಿಯ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದು, ಸುಮಾರು 10 ಎಕರೆಗೂ ಅಧಿಕ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ವ್ಯಕ್ತವಾಗಿದೆ.

ಮಾದಾವರ ಗ್ರಾಮಸ್ಥರು ಹಲವು ಬಾರಿ ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ, ಕಳೆದ ಐದಾರು ವರ್ಷದಿಂದ ಹೋರಾಟ ಸಹ ನಡೆಸಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೆರೆ ತುಂಬಿದ್ದು, ನೀರನ್ನು ಹೊರಕ್ಕೆ ಬಿಡುತ್ತಿಲ್ಲ. ಅಲ್ಲದೆ ಜಿಂದಾಲ್ ಕಂಪನಿಯ ಕಲುಷಿತ ನೀರು ಕೆರೆ ಒಡಲು ಸೇರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದಿಂದ ಪ್ರತಿಕ್ರಿಯೆ
ರೈತರ ಮನವಿಯನ್ನು ಪುರಸ್ಕರಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಕೆರೆ ಅಭಿವೃದ್ಧಿ, ಕಲುಶಿತ ನೀರು ಸೇರದಂತೆ ಹಾಗೂ ಒತ್ತುವರಿ ಕುರಿತು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಈ ಮೂಲಕ ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರೈತರ ನಡೆ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Click to comment

Leave a Reply

Your email address will not be published. Required fields are marked *