Monday, 20th May 2019

‘ನಮ್ಮ ಸಿಎಂ’ ಸತೀಶ್ ಜಾರಕಿಹೊಳಿ – ಕಲಬುರಗಿ ನಗರದಾದ್ಯಂತ ಸ್ವಾಗತ ಬ್ಯಾನರ್

ಕಲಬುರಗಿ: `ನಮ್ಮ ಸಿಎಂ ಸತೀಶ್ ಜಾರಕಿಹೊಳಿ’ ಎನ್ನುವ ಬ್ಯಾನರ್ ಕಲಬುರಗಿ ನಗರದಾದ್ಯಂತ ರಾರಾಜಿಸುತ್ತಿದ್ದು, ಮಾನವ ಬಂದುತ್ವ ವೇದಿಕೆ ಮತ್ತು ದಲಿತ ಸೇನೆ ಈ ಬ್ಯಾನರ್ ಹಾಕಿದೆ.

ಜಿಲ್ಲೆಯಲ್ಲಿ ಸದ್ಯ ಸತೀಶ್ ಜಾರಕಿಹೊಳಿ ಅವರ ಬ್ಯಾನರ್ ಕುರಿತು ಬಿಸಿ ಬಿಸಿ ರಾಜಕೀಯ ಚರ್ಚೆಗೆ ನಡೆಯುತ್ತಿದೆ. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಆಗಬೇಕಂಬ ಮಾತು ಕೇಳಿ ಬರುತ್ತಿದೆ. ಇಂದು ಸತೀಶ್ ಜಾರಕಿಹೊಳಿ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಬ್ಯಾನರ್ ಮೂಲಕ ಸಚಿವರನ್ನು ಬೆಂಬಲಿಗರು ಸ್ವಾಗತ ಮಾಡಿದ್ದಾರೆ.

ಈ ಹಿಂದೆಯೂ ಸಚಿವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಸಿಎಂ ನಮ್ಮ ಸಾಹುಕಾರ’ ಸತೀಶ್ ಜಾರಕಿಹೊಳಿ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸತೀಶ್ ಜಾರಕಿಹೊಳಿ, ನಾನು ಸಿಎಂ ಯಾಕಾಗಬಾರದು ಎಂದಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನಕ್ಕೆ ಅರ್ಹ ಎಂದು ಹೇಳಿದ್ದರು.

ಇತ್ತ ಸಚಿವರ ಸಹೋದರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಸತೀಶ್ ಅವರನ್ನ ಮುಖ್ಯಮಂತ್ರಿ ಮಾಡುವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ರಾಜು ಗೌಡ ಕೂಡ ಸತೀಶ್ ಜಾರಕಿಹೊಳಿ ಅಥವಾ ಮಾಜಿ ಸಚಿವ ಶ್ರೀರಾಮುಲು ಸಿಎಂ ಆಗಲೇಬೇಕು ಎಂದು ಒತ್ತಾಯಿಸಿದ್ದರು.

ವಾಲ್ಮೀಕಿ ಸಮುದಾಯದ ಜನರ ಕೂಗು ವಿಧಾನಸೌಧಕ್ಕೆ ತಲುಪುತ್ತಿಲ್ಲ. ರಾಜ್ಯದಲ್ಲಿ 17 ಶಾಸಕರು, ಇಬ್ಬರೂ ಸಂಸದರು ಇದ್ದರು ಕೂಡ ಕೂಗು ಕೇಳುತ್ತಿಲ್ಲ. ನಮ್ಮ ಸಮಾಜದಿಂದ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶ್ರೀರಾಮುಲು ಮುಖ್ಯಮಂತ್ರಿ ಆಗಲೇಬೇಕು ಎಂದು ವಾಲ್ಮೀಕಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *