Connect with us

Chitradurga

ಕಳಪೆ ಶೇಂಗಾಬೀಜ ಪೂರೈಸಿದರೆ ರೈತನ ಕೊಲೆ ಮಾಡಿದಂತೆ – ಅಧಿಕಾರಿಗಳ ವಿರುದ್ಧ ಗುಡುಗಿದ ಬಿ.ಸಿ ಪಾಟೀಲ್

Published

on

ಚಿತ್ರದುರ್ಗ: ಮುಂಗಾರು ಹಂಗಾಮು ಪ್ರಾರಂಭವಾಗಿದೆ ಹೀಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ಒಂದು ವೇಳೆ ಕಳಪೆ ಬೀಜ ಪೂರೈಕೆ ಮಾಡಿದರೆ ರೈತನ ಕೊಲೆ ಮಾಡಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕೃಷಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

ಕೆಲ ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ತಮ್ಮ ಪತ್ನಿಯ ತಾಳಿ ಮಾರಾಟ ಮಾಡಿ ಬೀಜ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷೆ ಮಾಡಬೇಕು. ಒಂದು ವೇಳೆ ಅದು ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲಾಕ್‍ಡೌನ್ ಹಿನ್ನೆಲೆ ಇಂದು ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ, ಬೀಜ, ಗೊಬ್ಬರ ಸರಬರಾಜು ಸೇರಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ಕೈಗೊಂಡ ಅಗತ್ಯ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಮಾತನಾಡಿ, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಏಪ್ರಿಲ್ 1ರಿಂದಲೇ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಇತರೆ ಜಿಲ್ಲೆಗಳು ಸೇರಿದಂತೆ ಅಂತರಾಜ್ಯಗಳಿಗೂ ಸಾಗಾಟ ನಡೆಯುತ್ತಿದೆ. ರೈತರಿಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಬಿತ್ತನೆ ಬೀಜ, ಕೃಷಿ ಪರಿಕರಗಳು, ಇದಕ್ಕೆ ಪೂರಕವಾದ ರಿಪೇರಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಯಾವುದೇ ಅಡೆತಡೆಗಳಿರುವುದಿಲ್ಲ. ಉಳುಮೆ, ಕೊಯ್ಲ ನಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿಗಳು ಬೆಳೆಯಲಾಗುತ್ತಿದ್ದು, ಇವುಗಳನ್ನು ಹೆಚ್ಚಿನ ದಿನ ಸಂಗ್ರಹಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೆಜ್‍ಗಳು ಹಾಗೂ ಆಹಾರ ಸಂಸ್ಕರಣೆ ಘಟಕಗಳ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತುಂಬಾ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಕಂಟೈನರ್ ಗಳ ಮೂಲಕ ತಾತ್ಕಾಲಿಕವಾಗಿ ಎಲ್ಲಾ ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿದಲ್ಲಿ ಇಂತಹ ಸಂದರ್ಭದಲ್ಲಿ ರೈತರಿಗೆ, ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮಾರುಕಟ್ಟೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ರೈತರು ಬೆಳೆದ ಯಾವುದೇ ಬೆಳೆ ಮಾರಾಟ, ತೋಟಗಾರಿಕೆ ಹಣ್ಣು-ತರಕಾರಿ ಮಾರಾಟಕ್ಕೆ ಅಡೆತಡೆಗಳಿರುವುದಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಯಾವುದೇ ಅಡೆತಡೆಗಳಿರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ಮೂಲಕ ರೈತರಿಗೆ ನೆರವಾಗಲು ತಿಳಿಸಿದರು.

ಈ ಸಭೆಯಲ್ಲಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಡಿ. ಶೇಖರ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.