Connect with us

Belgaum

ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

Published

on

ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv