Wednesday, 24th April 2019

Recent News

ನಾಶವಾದ ಬೆಳೆಯ ಮೇಲೆ ಬಿದ್ದು ರೈತನ ಗೋಳಾಟ

ಮಂಡ್ಯ: ಜಿಲ್ಲೆಯಲ್ಲಿ ಆನೆಗಳ ದಾಳಿ ಮುಂದುವರಿದಿದ್ದು, ರೈತನೊಬ್ಬನ ಬಾಳೆ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇದರಿಂದ ರೈತ ನಾಶವಾದ ಬೆಳೆಯ ಮೇಲೆ ಬಿದ್ದು ಒದ್ದಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಚನಹಳ್ಳಿ ಗ್ರಾಮದ ನಿವಾಸಿ ರಾಜು ಎಂಬವರ ಬಾಳೆ ಬೆಳೆ ನಾಶವಾಗಿದೆ. ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ರೈತ ರಾಜು ಸುಮಾರು ಒಂದುವರೆ ಎಕರೆಯಲ್ಲಿ ಬಾಳೆಯನ್ನು ಬೆಳೆದಿದ್ದರು. ಬಾಳೆ ಹಾಕಿ ಸುಮಾರು 10 ತಿಂಗಳಾಗಿದ್ದು, ಇನ್ನೂ ಎರಡು ತಿಂಗಳಿನಲ್ಲಿ ಬಾಳೆಯನ್ನು ಕಟಾವ್ ಮಾಡಬೇಕಿತ್ತು.

ಬುಧವಾರ ರಾತ್ರಿ ಏಕಾಏಕಿ ಆನೆಗಳ ದಂಡು ಬಾಳೆ ತೋಟಕ್ಕೆ ನುಗ್ಗಿ ಎಲ್ಲವನ್ನು ನಾಶ ಮಾಡಿವೆ. ಸುಮಾರು 3 ಲಕ್ಷ ರೂ. ಬೆಳೆ ನಾಶವಾಗಿದೆ. ಮುಂಜಾನೆ ರಾಜು ಎಂದಿನಂತೆ ತೋಟಕ್ಕೆ ಬಂದಾಗ ಬಾಳೆ ನಾಶವಾಗಿರುವುದನ್ನು ನೋಡಿ ಆಘಾತವಾಗಿ ನಾಶವಾಗಿದ್ದ ಬಾಳೆ ಬೆಳೆಯ ಮೇಲೆ ಬಿದ್ದು, ಗೋಳಾಡಿದ್ದಾರೆ. ಮಕ್ಕಳು ರೀತಿ ಚೆನ್ನಾಗಿ ಪೋಷಣೆ ಮಾಡಿದ್ದೆ. ಈ ಆನೆಗಳ ದಾಳಿಯಿಂದ ಎಲ್ಲ ನಾಶವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ಆನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದು, ತಾಲೂಕು ಆಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸತ್ತಂತಿರುವ ಅರಣ್ಯ ಇಲಾಖೆಯಿಂದ ಈ ರೀತಿ ಆಗಿದೆ. ಹೀಗಾಗಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *