Monday, 15th July 2019

ಕಲ್ಲು ಗುಡ್ಡವನ್ನು ಕೃಷಿ ಭೂಮಿಯನ್ನಾಗಿ ಮಾಡಿದ್ರು- ವರ್ಷಕ್ಕೆ 15 ಲಕ್ಷ ರೂ. ಸಂಪಾದಿಸ್ತಾರೆ ರೈತ

ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುಸ್ತರಿವಾಡಿ ಗ್ರಾಮದ ರೈತ, ಕಲ್ಲು ಬಂಡೆಗಳಿಂದ ಕೂಡಿದ ಜಾಗವನ್ನು ಕೃಷಿ ಭೂಮಿಯಾಗಿ ಮಾಡಿಕೊಂಡು ಪ್ರತಿ ವರ್ಷ 10 ರಿಂದ 15 ಲಕ್ಷ ರೂ. ಸಂಪಾದನೆ ಮಾಡುವ ಮೂಲಕ ರಾಜ್ಯದ ರೈತರಿಗೆ ಮಾದರಿಯಾಗಿದ್ದಾರೆ.

ಮುಸ್ತರಿವಾಡಿ ಗ್ರಾಮದ ರೈತ ವೀರರಡ್ಡಿ ಜಿಲ್ಲೆಯ ಮಾದರಿ ರೈತರಾಗಿದ್ದಾರೆ. ರಾಜ್ಯದಲ್ಲಿ ಅನ್ನದಾತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ಬರಡು ಭೂಮಿಯಲ್ಲಿ ಬಂಪರ್ ಬೆಳೆ ಬೆಳೆದು ರೈತರಿಗೆ ಸ್ಫೂರ್ತಿಯಾಗಿದ್ದಾರೆ. ತನ್ನ 2.5 ಎಕ್ರೆ ಭೂಮಿಯಲ್ಲಿ ಕಡಿಮೆ ಬಂಡವಾಳದಲ್ಲಿ ಪಪ್ಪಾಯ, ಮೂಸಂಬಿ ಬೆಳೆಗಳನ್ನು ಬೆಳೆದು ಪ್ರತಿ ವರ್ಷ 10 ರಿಂದ 15 ಲಕ್ಷ ರೂ. ಸಂಪಾದನೆ ಮಾಡುತ್ತಾರೆ.

ಮೊದಲು ಈ ಭೂಮಿ ಬರಡು ಭೂಮಿಯಾಗಿತ್ತು. 5 ವರ್ಷಗಳ ಸತತ ಪರಿಶ್ರಮದಿಂದಾಗಿ ಕಲ್ಲು ಗುಡ್ಡವನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದೆ. ಬಳಿಕ ಕಷ್ಟ ಪಟ್ಟು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೇನೆ. ಕಷ್ಟ ಪಟ್ಟು ಕೆಲಸ ಮಾಡಿದರೆ ಎಲ್ಲಾ ಸಿಗುತ್ತದೆ. ಮನಸಿದ್ದರೆ ಮಾರ್ಗ ಎಂದು ಮಾದರಿ ರೈತ ವೀರರೆಡ್ಡಿ ಹೇಳಿದ್ದಾರೆ.

ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಈ ರೀತಿಯ ಸತತ ಪರಿಶ್ರಮ ಪಟ್ಟರೆ ಏನಾದರು ಮಾಡಬಹದು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ರೂ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ನಮ್ಮ ತಂದೆಯ ಸ್ಫೂರ್ತಿ ಪಡೆದು ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ನಮ್ಮನ್ನು ಕೃಷಿಯಲ್ಲಿ ತೊಡಿಸಿಕೊಂಡು ಕೃಷಿ ಬಗ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಈ ಬೆಳೆಗೆ ಯಾವುದೇ ರಾಸಾಯಿನಿಕ ಗೊಬ್ಬರ ಹಾಕದೆ ಸಾವಯವ ಗೊಬ್ಬರ ಹಾಕಿ ಇಳುವರಿ ಜಾಸ್ತಿ ತೆಗೆಯುತ್ತಾರೆ. ನಮ್ಮ ತಂದೆಯ ಕೃಷಿ ಮಾದರಿಯನ್ನು ನೋಡಿದ ಜಿಲ್ಲೆಯ ರೈತರು ಸಲಾಂ ಎನ್ನುತ್ತಿದ್ದಾರೆ. ಭೂಮಿತಾಯಿಯನ್ನು ನಂಬಿದವರಿಗೆ ಯಾವತ್ತೂ ಮೋಸವಾಗುವುದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಾದರಿ ರೈತನ ಮಗ ಸಿದ್ದಾರೆಡ್ಡಿ ತಿಳಿಸಿದ್ದಾರೆ.

ಒಬ್ಬ ರೈತ ಮನಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ಬರಡು ಭೂಮಿಯನ್ನು ಸತತ ಪರಿಶ್ರಮದಿಂದ ಕೃಷಿ ಭೂಮಿಯನ್ನಾಗಿ ಮಾಡಿಕೊಂಡ ಈ ಮಾದರಿ ರೈತನನ್ನು ನಾವು ಮೆಚ್ಚಬೇಕು. ಈ ರೈತನ ಸಾಧನೆಯನ್ನು ನೋಡಿಯಾದರು ರಾಜ್ಯದಲ್ಲಿಯಾಗುವ ರೈತರ ಸರಣಿ ಆತ್ಮಹತ್ಯೆಗಳು ಕಡಿಮೆಯಾಗಲಿ ಎನ್ನುವುದು ನಮ್ಮ ಆಶಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *