Monday, 18th November 2019

Recent News

ಚರಂತಿಮಠ ಸಚಿವರಾಗಬೇಕು – ತಿಮ್ಮಪ್ಪನ ಮೆಟ್ಟಿಲನ್ನು ಮಂಡಿಯೂರಿ ಹತ್ತಿ ಪ್ರಾರ್ಥನೆ

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ರಾಜ್ಯದ ಸಿಎಂ ಆಗಬೇಕು. ಶಾಸಕ ವೀರಣ್ಣ ಚರಂತಿಮಠ ಸಚಿವರಾಗಬೇಕೆಂದು ಬಾಗಲಕೋಟೆ ವ್ಯಕ್ತಿಯೊಬ್ಬರು ತಿರುಪತಿ ತಿಮ್ಮಪ್ಪನ ದೇಗುಲದ ಮೆಟ್ಟಿಲನ್ನು ಮಂಡಿಯೂರಿ ಹತ್ತುವ ಮೂಲಕ ವಿಭಿನ್ನವಾಗಿ ಪ್ರಾರ್ಥಿಸಿದ್ದಾನೆ.

ಬಿಎಸ್‍ವೈ ಸಿಎಂ ಆಗಲಿ ಎಂದು ರಾಜ್ಯದ ಹಲವು ಕಡೆ ಅವರ ಅಭಿಮಾನಿಗಳು ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿಯ ನಿವಾಸಿ ಮಾಂತೇಶ್ ಷಹಾಪುರ ಕೂಡ ಆಸೆ ಪಟ್ಟಿದ್ದಾರೆ. ತಮ್ಮ ನೆಚ್ಚಿನ ನಾಯಕ ಮತ್ತೆ ಆಡಳಿತಕ್ಕೆ ಬರಲಿ ಎಂದು ದೇವರ ಮೊರೆ ಹೋಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸಚಿವರಾಗಬೇಕೆಂದು ಆಶಿಸಿ, ಇಂದು ಬೆಳಗ್ಗೆ ತಿರುಪತಿ ತಲುಪಿರುವ ಮಾಂತೇಶ್ ಅಲ್ಲಿನ ದೇಗುಲದ ಮೆಟ್ಟಿಲನ್ನು ಮಂಡಿಯೂರಿ ಏರುವ ಮೂಲಕ ದೇವರಲ್ಲಿ ತನ್ನ ಕೋರಿಕೆ ಇಟ್ಟಿದ್ದಾರೆ.

ಕಲಬುರಗಿಯಲ್ಲಿ ಕೂಡ ಬಿಎಸ್‍ವೈ ಮತ್ತೆ ಸಿಎಂ ಆಗಲಿ ಎಂದು ವಿಶೇಷ ಪೂಜೆ ಮಾಡಲಾಗಿದೆ. ಸ್ವಾಭಿಮಾನಿ ಲಿಂಗಾಯತ ಬಳಗದ ವತಿಯಿಂದ ನಗರದ ವಿದ್ಯಾನಗರ ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಅಭಿಷೇಕ, ಪೂಜೆ ಸಲ್ಲಿಸಲಾಗಿದೆ. ಬಳಗದ ಅಧ್ಯಕ್ಷ ಎಮ್‍ಎಸ್ ಪಾಟೀಲ್ ನೇತೃತ್ವದಲ್ಲಿ ಈ ಪೂಜೆ ಸಲ್ಲಿಸಿ, ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.

ಇತ್ತ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಮಾಜಿ ಸಿಎಂ ಬಿಎಸ್‍ವೈ ಅವರ ಹುಟ್ಟೂರಾಗಿದ್ದು, ಅಲ್ಲಿ ಕೂಡ ಮತ್ತೆ ಬಿಎಸ್‍ವೈ ಸಿಎಂ ಆಗಲಿ ಎಂದು ಹೋಮ-ಹವನ, ವಿಶೇಷ ಪೂಜೆ ಮಾಡಲಾಗಿತ್ತು. ಅಲ್ಲದೆ ಗುರುವಾರ ಬೆಳಗ್ಗೆ 8 ಗಂಟೆಯಿಂದ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನಡೆಯಲಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *