Saturday, 17th August 2019

ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

ಮುಂಬೈ: ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪಾರ್ಕ್ ಮಾಡಿದ್ದ 7 ವಾಹನಗಳ ಮೇಲೆ ಕಾರು ಹರಿಸಿ ದಾಂಧಲೆ ಎಬ್ಬಿಸಿದ್ದ ಪ್ರಸಿದ್ಧ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಏ.2ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿತ್ತು. ಪ್ರಕರಣ ಸಂಬಂಧ ನಟಿ ರೂಹಿ ಹಾಗೂ ಆಕೆಯ ಇಬ್ಬರು ಗೆಳೆಯರಾದ ರಾಹುಲ್ ಹಾಗೂ ಸ್ವಪ್ನಿಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಘಟನೆ ವಿವರ:
ರೂಹಿ, ರಾಹುಲ್ ಹಾಗೂ ಸ್ವಪ್ನಿಲ್ ರಾತ್ರಿ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದರು. ಹೀಗೆ ಹಿಂದಿರುಗುತ್ತಿದ್ದಾಗ ಮೂವರಿಗೆ ವಾಶ್ ರೂಮ್ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅವರು ತಮ್ಮ ದಾರಿಯಲ್ಲೇ ಸಿಗುವ ಪ್ರಸಿದ್ಧ ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದ್ದಾರೆ. ಆದ್ರೆ ಅದಾಗಲೇ ತಡವಾಗಿದ್ದು ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿದ್ದರು. ಈ ವೇಳೆ ಈ ಮೂವರು ತಮಗೆ ವಾಶ್ ರೂಮ್ ಗೆ ಹೋಗಬೇಕು. ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಆದ್ರೆ ರೆಸ್ಟೋರೆಂಟ್ ಸಿಬ್ಬಂದಿ ಇವರ ಮಾತಿಗೆ ಸಮ್ಮತಿ ಸೂಚಿಸಿರಲಿಲ್ಲ. ಅಲ್ಲದೆ ಈಗಾಗಲೇ ನಾವು ರೆಸ್ಟೋರೆಂಟ್ ಕ್ಲೋಸ್ ಮಾಡಿದ್ದು ತೆರೆಯಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ.

ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟುಕೊಂಡ ಮೂವರು ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ನಡೆಸಿ ರೆಸ್ಟೋರೆಂಟ್ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಇದರಿಂದ ಬೆದರಿದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಕ್ಯಾರೇ ಎನ್ನದ ಈ ಮೂವರು ಕುಡಿದ ಮತ್ತಿನಲ್ಲಿ ತಮ್ಮ ಹುಚ್ಚಾಟವನ್ನು ಮುಂದುವರಿಸಿದ್ದಾರೆ. ಅಲ್ಲದೆ ರೆಸ್ಟೋರೆಂಟ್ ಎದುರು ಪಾರ್ಕ್ ಮಾಡಿದ್ದ 4 ದ್ವಿಚಕ್ರವಾಹನಗಳು ಹಾಗೂ ಮೂರು ಕಾರುಗಳಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಹಾನಿ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *