Connect with us

ರಾಜಕಾರಣದ ಬಾಗಿಲು ಮುಚ್ಚಿ ಆರೋಗ್ಯ ಭಾಗ್ಯದ ಬಾಗಿಲು ತೆಗೆಯಿರಿ

ರಾಜಕಾರಣದ ಬಾಗಿಲು ಮುಚ್ಚಿ ಆರೋಗ್ಯ ಭಾಗ್ಯದ ಬಾಗಿಲು ತೆಗೆಯಿರಿ

ಬದ್ರುದ್ದೀನ್ ಕೆ ಮಾಣಿ
“ಇವತ್ತಿನ ಪರಿಸ್ಥಿತಿಯಲ್ಲಿ ನಾವೇನಾದ್ರೂ ವಿರೋಧಪಕ್ಷದಲ್ಲಿ ಇದ್ದಿದ್ದರೆ ಆಕಾಶ-ಪಾತಾಳ ಒಂದಾಗುವಂತೆ ಗದ್ದಲ ಎಬ್ಬಿಸಿ ಆಡಳಿತ ಪಕ್ಷದವರನ್ನು ಓಡಾಡಲು ಕೂಡ ಬಿಡುತ್ತಿರಲಿಲ್ಲ. ಕಾಂಗ್ರೆಸ್‍ನವರಿಗೆ ಪ್ರತಿಪಕ್ಷದ ಕೆಲಸ ಮಾಡೋಕ್ಕೆ ಗೊತ್ತಿಲ್ಲ ಬಿಡಿ” ಹೀಗೆಂದು ಹೇಳುತ್ತಾ ಓಡಾಡುತ್ತಿರುವವರು ಬೇರೆ ಯಾರೂ ಅಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿಯ ಹಲವು ಹಿರಿಯ ನಾಯಕರು, ಕಾರ್ಯಕರ್ತರು.

ಹೌದು, ಹೀಗಂತ ಮಾಧ್ಯಮದ ಮುಂದೇನೂ ಬಂದು ಅವರು ಇದನ್ನು ಹೇಳುತ್ತಿಲ್ಲ. ಅನೌಪಚಾರಿಕವಾಗಿ ಮಾತನಾಡುತ್ತಾ ಸಾಕಷ್ಟು ನಾಯಕರು ಹೀಗೆ ಹೇಳುತ್ತಿದ್ದಾರೆ. ಹಲವಾರು ಕಾರ್ಯಕರ್ತರು ಕೂಡ ಇದೇ ರೀತಿ ಅಸಮಾಧಾನದಲ್ಲಿ ಗೊಣಗುತ್ತಿರುವುದು ಕೂಡ ನಿಜ.. ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡುವ ಸಾಕಷ್ಟು ಬಿಜೆಪಿ ನಾಯಕರು ನಮ್ಮ ನಡುವೆ ಇದ್ದಾರೆ.. ಅವರು ಈ ಸಾವು ನೋವುಗಳನ್ನು ನೋಡಲಾರದೆ ತೊಳಲಾಡುತ್ತಿದ್ದಾರೆ.. ಆದರೆ ಅವರು ಬಹಿರಂಗವಾಗಿ ಮಾತನಾಡದೇ, ಅಸಹಾಯಕರಾಗಿದ್ದಾರೆ.. ಕೆಲವು ಕಾರ್ಯಕರ್ತರು ತಮ್ಮ ಮುಖಂಡರುಗಳಿಗೆ ದೂರವಾಣಿ ಕರೆ ಮಾಡಿ ಅಸಹಾಯಕತೆ ತೋಡಿರುವ ಸಾಕಷ್ಟು ಉದಾಹರಣೆಗಳಿವೆ. ಕಾರ್ಯಕರ್ತರು ಮತ್ತು ನಾಯಕರ ನಡುವಿನ ಸಂಭಾಷಣೆಯ ಹಲವು ಆಡಿಯೋ ತುಣುಕುಗಳು ಬಹಿರಂಗವಾಗಿರುವುದೇ ಇವೆಲ್ಲಕ್ಕೂ ಸಾಕ್ಷಿಯಾಗಿವೆ.

 

ನಿಜ, ಕೊರೊನಾ ಮಹಾಮಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆಡಳಿತಾರೂಢ ಬಿಜೆಪಿ ಸರ್ಕಾರಗಳು ಎಷ್ಟು ವಿಫಲವಾಗಿವೆಯೋ, ಅಷ್ಟೇ ಪ್ರಮಾಣದಲ್ಲಿ ವಿಪಕ್ಷಗಳು ಕೂಡ ಪರಿಣಾಮಕಾರಿಯಾಗಿ ಧ್ವನಿ ಎತ್ತಿಲ್ಲ ಎಂಬ ಅಭಿಪ್ರಾಯವೂ ಇದೆ. ವಿರೋಧಕ್ಕಾಗಿ ವಿರೋಧ, ಟೀಕೆಗಾಗಿ-ಟೀಕೆ ಅನ್ನೋ ರೀತಿಯಲ್ಲಿ ಪ್ರತಿಪಕ್ಷ ವರ್ತಿಸ್ತಾ ಇದೆ. ಹಾಗಂತ, ಪ್ರತಿಪಕ್ಷ ಏನೂ ಮಾಡೇ ಇಲ್ಲ, ಲೋಪಗಳನ್ನು ಎತ್ತಿ ತೋರಿಸಿಲ್ಲ ಎಂದಲ್ಲ.. ಜನರ ನೋವಿಗೆ ಧ್ವನಿಯಾಗಿ, ಸರ್ಕಾರಕ್ಕೆ ಎಚ್ಚರಿಸಿ, ಜನರಿಗೆ ಸಿಗಬಹುದಾದ ನೆರವು ಸಿಗುವಂತೆ ಮಾಡಲಾಗಿಲ್ಲ ಅನ್ನೋದು ಪ್ರತಿಪಕ್ಷದ ವೈಫಲ್ಯ. ಅಂದರೆ ಸರ್ಕಾರ ಎಲ್ಲಿ ಲೋಪ ಮಾಡುತ್ತಿದೆ, ಅದರ ಬದಲಾಗಿ ನಾವೆಲ್ಲಿ ಸಹಾಯ ಮಾಡಬಹುದು ಅಂತಾ ತಳಮಟ್ಟದಲ್ಲಿ ಕೆಲಸ ಮಾಡುವುದನ್ನು ಬಿಟ್ಟು, ಮಾಧ್ಯಮಗಳು ಗಲ್ಲಿ-ಗಲ್ಲಿಗೆ ತಿರುಗಿ, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪ್ರಸಾರಮಾಡುತ್ತಿರುವುದಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಾ, ತಮ್ಮ ಅಸ್ತಿತ್ವ ತೋರಿಸಿಕೊಳ್ಳುತ್ತಿವೆಯಷ್ಟೆ. ಪ್ರತಿಪಕ್ಷವಾಗಿ ವಿರೋಧಕ್ಕೆ ವಿರೋಧ ಮಾಡುತ್ತಿವೆ ಅನ್ನೋ ರೀತಿಯಲ್ಲಿ ವರ್ತಿಸಿ, ನಿರ್ಲಕ್ಷ್ಯವಹಿಸಿದೆ ಅನ್ನೋದು ಮಾತ್ರ ವಾಸ್ತವ.

ಯಾವಾಗಲೂ, ಪ್ರತಿಪಕ್ಷಗಳು ಆಡಳಿತಾರೂಢ ಸರ್ಕಾರದ ವೈಫಲ್ಯಗಳನ್ನು ತಳಮಟ್ಟದಲ್ಲಿ ಪತ್ತೆ ಮಾಡಿ ಮಾಧ್ಯಮಗಳ ಮೂಲಕ ನಾಡಿನ ಗಮನ ಸೆಳೆಯಬೇಕಾದ್ದು ಅವರ ಜವಾಬ್ದಾರಿ. ಆದರೆ ಇಲ್ಲಿ ಹಾಗೆ ಆಗುತ್ತಿಲ್ಲ. ಮಾಧ್ಯಮಗಳಲ್ಲಿ ಬರುವ ಸರ್ಕಾರದ ಲೋಪಗಳನ್ನು ಮುಂದಿಟ್ಟು ಸದ್ದು ಮಾಡುತ್ತಾ, ಪ್ರತಿಪಕ್ಷಗಳು ಅಷ್ಟಕ್ಕೆ ಸೀಮಿತವಾಗಿವೆ.

ಪ್ರತಿಪಕ್ಷಗಳು ಏನೇ ಮಾಡಲಿ, ಆಡಳಿತಾರೂಢ ಸರ್ಕಾರಕ್ಕಾದ್ರೂ ಹೊಣೆಗಾರಿಕೆ ಇರಬೇಕಲ್ಲ: ಮತ ನೀಡಿ ಚುನಾಯಿಸಿದ ಜನರ ಹಿತಕ್ಕಾದ್ರೂ ಕೆಲಸ ಮಾಡಬೇಕಲ್ಲ. ಪ್ರತಿ ಪಕ್ಷಗಳ ಟೀಕೆ, ಸಲಹೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳದ ಆಡಳಿತ ಪಕ್ಷ ಅದನ್ನು ರಾಜಕಾರಣಕ್ಕೆ ತಿರುಗಿಸಿ ಸಮರ್ಥನೆಗೆ ಇಳಿದಿರುವುದು ಇಂದಿನ ದುರಂತ. ಹೌದು ಪ್ರತಿಪಕ್ಷಗಳು ಎತ್ತಿ ತೋರಿಸುವ ಲೋಪಗಳು ರಾಜಕೀಯದಂತೆ ಕಾಣುತ್ತಿದ್ದರೂ, ಆ ಲೋಪಗಳು ಪುನಾರಾವರ್ತನೆಯಾಗದಂತೆ ಸರಿಪಡಿಸಿ, ಸಮಸ್ಯೆ ಬಗೆಹರಿಸಿ ತಿರುಗೇಟು ನೀಡಬೇಕಾದ ಆಡಳಿತ ಪಕ್ಷ, ತಾನೂ ಏನೂ ಕಡಿಮೆ ಇಲ್ಲ ಅಂತ ರಾಜಕೀಯಕ್ಕೆ ಪ್ರತಿ ರಾಜಕೀಯ ಮಾಡುತ್ತಾ ಜನರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿರುವುದು ಮಾತ್ರ ದುರದೃಷ್ಟಕರ ವಿದ್ಯಮಾನ.. ಮಾಧ್ಯಮಗಳೇನಾದ್ರೂ ಇಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಿರದಿದ್ದರೆ ಖಂಡಿತ, ರಾಜ್ಯದ ಜನ ಇನ್ನಷ್ಟು ತತ್ತರಿಸಿ ಹೋಗಿ ಹಾದಿ-ಬೀದಿ ಹೆಣಗಳಾಗುವುದನ್ನು ನೋಡಬೇಕಾದ ಪರಿಸ್ಥಿತಿ ಬರುತ್ತಿತ್ತೇನೋ..

 

ಕೊರೊನಾ ಎರಡನೇ ಅಲೆ ಅನಿರೀಕ್ಷಿತವಾಗಿ ಅಪ್ಪಳಿಸಿತು.. ನಾವು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ ಎಂದು ಹೇಳುತ್ತಾ ತಿರುಗಾಡುತ್ತಿರುವ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರು, ಮುಖಂಡರು ಕಳೆದ 1 ವರ್ಷದ ಅವಧಿಯಲ್ಲಿ ತಜ್ಞರು ನೀಡಿದ ಸಲಹೆ, ಶಿಫಾರಸುಗಳನ್ನು ಕಡೆಗಣಿಸಿ ಮೈಮರೆತಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಎನ್ನುವುದು ಕಟು ವಾಸ್ತವ.. ಇದು ಜನತೆಯ ಅರಿವಿಗೆ ಬಂದಿದೆ ಎಂದು ಗೊತ್ತಾಗಿ ಈಗ ತಣ್ಣನೆ, ಒಳಗೊಳಗೇ ಕಂಪಿಸ ತೊಡಗಿದ್ದಾರೆ ಸರ್ಕಾರದ ಒಳಗಿರುವವರು.

ಆಡಳಿತಪಕ್ಷದ ಸಮರ್ಥನೆ ಎಷ್ಟು ಹಾಸ್ಯಾಸ್ಪದ ಎಂದರೆ, ಇಷ್ಟೆಲ್ಲಾ ವೈಫಲ್ಯ ಸಾವು-ನೋವುಗಳಿಗೆ ಪ್ರತಿ ಪಕ್ಷ ಮತ್ತು ನಾಡಿನ ಜನತೆ ಹೊಣೆ ಅಂತಾ ಬಿಂಬಿಸಲು ಹೊರಟಿದ್ದಾರೆ.. ಇಲ್ಲಿ ಸರ್ಕಾರದ ಲೋಪಗಳೆಷ್ಟಿದೆಯೋ, ಅಷ್ಟೆ ಜನರ ತಪ್ಪುಗಳು ಇದೆ. ಇಂತಹ ಮಹಾಮಾರಿಯಿಂದ ನಾಡು ತತ್ತರಿಸಿರುವಾಗ ಎಷ್ಟು ಹೇಳಿದರೂ ಕೇಳದೇ ಜನತೆ ನಿರ್ಲಕ್ಷ್ಯ ವಹಿಸಿದ್ದು, ಸೋಂಕು ಈ ಪ್ರಮಾಣದಲ್ಲಿ ಹರಡಲು ಕಾರಣವಿರಬಹುದು. ಒಂದು ರೀತಿಯಲ್ಲಿ ಬಹುತೇಕ ಜನ ಸಾವನ್ನು ತಮ್ಮ ಮನೆ ಬಾಗಿಲಿಗೆ ಖುದ್ದಾಗಿ ಆಹ್ವಾನಿಸಿದಂತಹ ಹಲವಾರು ನಿದರ್ಶನಗಳಿವೆ. ನಾಗರಿಕರು ತಮ್ಮ ಹೊಣೆಗಾರಿಕೆ ಮರೆತಿದ್ದು ಕೂಡ ವಿಪರ್ಯಾಸ.

ನಾವು ಈಗ ಲೋಪ ಮತ್ತು ಸಮರ್ಥನೆಗಳ ವಿಷಯಕ್ಕೆ ಬರೋಣ. ಕಳೆದ 1 ವರ್ಷದಲ್ಲಿ ತಜ್ಞರು ನೀಡಿದ ಶಿಫಾರಸುಗಳನ್ನು ಕಡೆಗಣಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದೇ ಸರ್ಕಾರ ಮೈಮರೆತಿದ್ದೆ, ಇಷ್ಟೆಲ್ಲಾ ಅವಾಂತರಗಳಿಗೆ ಮೂಲ ಕಾರಣ ಅನ್ನೋದು ಕಟು ಸತ್ಯ. ಎರಡನೇ ಅಲೆ ಬರುತ್ತದೆ ಎಂದು ಅರಿವಿದ್ದರೂ, ಸಮಾವೇಶ, ಚುನಾವಣೆ, ಮದುವೆ, ಸಮಾರಂಭಗಳನ್ನು ರಾಜಾರೋಷವಾಗಿ ಮಾಡಲು ಬಿಟ್ಟು, ದಿಢೀರನೆ ಬಂದಂತೆ ತೋರಿದ ಸೋಂಕನ್ನು ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಕೈ ಚೆಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದ್ದು ವಾಸ್ತವ. ಸರ್ಕಾರವೇ ಜನರ ಮಾರಣಹೋಮ ನಡೆಯಲು ಪರೋಕ್ಷ ಕಾರಣವಾಯಿತು ಅಂದರೆ ತಪ್ಪಲ್ಲ.. ಈ ಅವಾಂತರಕ್ಕೆ ಆಡಳಿತಾರೂಢ ಪಕ್ಷದಿಂದ ಸೂಕ್ತ ಸಮರ್ಥನೆ ಇಲ್ಲ. ಹಾಗಂತ ಅವರೇನು ಕೆಲಸವೇ ಮಾಡಿಲ್ಲ, ಸುಮ್ಮನೆ ಕುಳಿತಿದ್ದಾರೆ ಎಂದರೆ ತಪ್ಪಾಗುತ್ತದೆ.. ತಡವಾಗಿಯಾದ್ರೂ ಎಚ್ಚೆತ್ತು ಈಗ ಓಡಾಡಲು ಆರಂಭಿಸಿದ್ದಾರೆ. ತಮ್ಮ ಕೈಲಾದ ಕೆಲಸವನ್ನು ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವುದರಿಂದ ಸರ್ಕಾರ ಎಷ್ಟೇ ಕೆಲಸ ಮಾಡಿದರೂ ಅದು ಕಾಣಿಸುತ್ತಿಲ್ಲ.

ದೂರದೃಷ್ಟಿಯಿಂದ ಮಾಡಬೇಕಾಗಿದ್ದ ಯೋಚನೆ, ಯೋಜನೆ, ಸೌಲಭ್ಯಗಳು ಈಗ ಯುದ್ಧಭೂಮಿಗೆ ಇಳಿದು, ಅಲ್ಲಿಯ ಅನುಭವನದ ಆಧಾರದಲ್ಲಿ ತಯಾರಿ ನಡೆಸುತ್ತಾ ಹೋರಾಡುವ ದುಸ್ಥಿತಿ ಸರ್ಕಾರಕ್ಕೆ ಬಂದೊದಗಿದೆ. ಅನುಭವದಿಂದ ಅಲ್ಪ ಅವಧಿಯಲ್ಲೇ ಸಾಕಷ್ಟು ಮೂಲಸೌಕರ್ಯಗಳು ಆಗಿದೆ, ಆಗುತ್ತಿದೆ ಅಷ್ಟಕ್ಕೆ ನಾವು ಸಮಾಧಾನಪಟ್ಟುಕೊಳ್ಳಬೇಕು.

ಮತ್ತೊಂದು ಮಹಾಎಡವಟ್ಟು ಅಂದರೆ ಲಸಿಕೆ ಅಭಿಯಾನ. 135 ಕೋಟಿ ಜನಸಂಖ್ಯೆಯ, ವೈವಿಧ್ಯಮಯ ವಾತಾವರಣ, ಜನಜೀವನವುಳ್ಳ ಭವ್ಯಭಾರತದಲ್ಲಿ ಇಂತಹದೊಂದು ಕಾರ್ಯ ಅನುಷ್ಠಾನಗೊಳಿಸುವುದು ಸುಲಭದ ಮಾತಲ್ಲ, ಇದು ಸವಾಲಿನ ವಿಷಯವೂ ಹೌದು. ಅದರ ಅರಿವಿಲ್ಲದ ಸರ್ಕಾರ ಏಕಾಏಕಿ ಪ್ರಚಾರಕ್ಕೊಸ್ಕರ, ಪುಕ್ಕಟೆ ಸಿಗುವ ಪ್ರಚಾರವನ್ನೇ ಅವಲಂಬಿಸಿ ಲಸಿಕೆ ಅಭಿಯಾನವನ್ನು ನಿರ್ವಹಿಸಿದ ರೀತಿ ಮಾತ್ರ ಹಾಸ್ಯಾಸ್ಪದ. ಅದನ್ನೇ ಹೇಳೋದು ದೂರದೃಷ್ಟಿ ಇಲ್ಲದ ಯೋಚನೆ, ಯೋಜನೆಗಳು ಎಡವಟ್ಟಲ್ಲದೇ, ಮತ್ತೇನನ್ನೂ ಮಾಡಲ್ಲ. ತನ್ನ ವೈಫಲ್ಯವನ್ನು ಈಗ ಆಡಳಿತಪಕ್ಷ, ಪ್ರತಿಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟು ನಗೆಪಾಟಲಿಗೆ ಈಡಾಗಿದೆ. ಪ್ರತಿಪಕ್ಷಗಳು ಮಾಡಿದ ಅಪಪ್ರಚಾರವೇ ಕಾರಣ ಅಂತ ಬೊಬ್ಬೆ ಹೊಡೆಯಲು ಆರಂಭಿಸಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಜನಪ್ರಿಯ ಪ್ರಧಾನಮಂತ್ರಿ, ಜನಪ್ರಿಯ ಸರ್ಕಾರದ ಪ್ರಚಾರಕ್ಕಿಂತ, ಪ್ರತಿಪಕ್ಷಗಳ ಅಪಪ್ರಚಾರ ಮೇಲುಗೈ ಸಾಧಿಸಿದೆ ಅಂದರೆ ಹಾಸ್ಯಾಸ್ಪದ ಅಲ್ಲವೇ. ಈಗಾಗಲೇ ಹೇಳಿದಂತೆ 135 ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ ಹೇಗೆ ಇಂತಹ ಒಂದು ಯೋಜನೆ ಜಾರಿಗೊಳಿಸಬೇಕೆಂಬ ಪರಿಕಲ್ಪನೆ ಇಲ್ಲದೇ ಮಾಡಿದ ಈ ನಿರ್ಧಾರ ಎಡವಟ್ಟು ಅಂದರೆ ತಪ್ಪಲ್ಲ. ಮೊದಲು ಜನರಲ್ಲಿ ಲಸಿಕೆಯ ಬಗ್ಗೆ ನಂಬಿಕೆ-ವಿಶ್ವಾಸ ಮೂಡಿಸಿ ಜನತೆ ಪಾಲ್ಗೊಳ್ಳುವಂತೆ ಮಾಡಿ, ಜನನಾಯಕರೆಸಿಕೊಂಡವರು ಮುಂದೆ ನಿಂತು ತಾವೇ ಮಾದರಿಯಾಗಿ ಲಸಿಕೆ ಪಡೆದು, ವಿಶ್ವಾಸ ಮೂಡಿಸಬೇಕಿತ್ತು. ಅಭಿಯಾನಕ್ಕೆ ಕಾಲಮಿತಿ ಎಷ್ಟು ಬೇಕಾಗಬಹುದು ಎಂದು ಲೆಕ್ಕಾಚಾರ ಹಾಕಿ ಮುಂದಡಿ ಇಡದೇ, ಕೇವಲ ಪ್ರತಿಪಕ್ಷಗಳನ್ನು ದೂರುತ್ತಾ ತಪ್ಪನ್ನು ಮುಚ್ಚಿಕೊಳ್ಳಲು ಹೊರಟಿದ್ದು ಮಾತ್ರ ವಿಪರ್ಯಾಸ.

ಈಗ ಕೈ ಮೀರಿದ ಪರಿಸ್ಥಿತಿಯಲ್ಲಿ ಸಾವು-ನೋವುಗಳು ಹೆಚ್ಚಾಗಿ ದೇಶದಾದ್ಯಂತ ಜನರ ಆಕ್ರೋಶಕ್ಕೆ ತುತ್ತಾಗಿರುವ ಆಡಳಿತ ಪಕ್ಷ, ಕನಿಷ್ಠ ಮಾಧ್ಯಮಗಳಲ್ಲಿ ತಮ್ಮ ಕಣ್ಣ ಮುಂದೆ ಬರುವ ವರದಿಗಳನ್ನೂ ಒಪ್ಪಲು ಸಿದ್ಧವಿಲ್ಲವೆಂದರೆ ಏನು ಹೇಳೋಣ..

ಜನಾಕ್ರೋಶಕ್ಕೆ ಹೆದರಿ ಮನೆಯೊಳಗೆ ಸೇರಿದ್ದ ಆಡಳಿತ ಪಕ್ಷದವರು, ಈಗ ಕೆಲವು ದಿನಗಳಿಂದ ಫೀಲ್ಡ್‍ಗೆ ಇಳಿದು ಸರ್ಕಾರವನ್ನು ಸಮರ್ಥನೆ ಮಾಡಲು ಆರಂಭಿಸಿದ್ದಾರೆ. ನಿರೀಕ್ಷಿಸಿದಂತೆಯೇ ಬಿಜೆಪಿ ನಾಯಕರು ಹಿಡಿದಿರುವ ಹಾದಿ ಏನೆಂದರೆ, ವಿಷಯಾಂತರ ಮಾಡಿ ಲೋಪಗಳನ್ನು ಮರೆಮಾಚುವುದು. ಲಸಿಕೆ ಅಭಿಯಾನಕ್ಕೆ ಪ್ರತಿಪಕ್ಷ ಹೊಣೆ ಅಂತಲೋ, ಕಾಂಗ್ರೆಸ್ ಟೂಲ್‍ಕಿಟ್ ಅಭಿಯಾನ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿದೆ ಅಂತಾನೋ, ಚರ್ಚ್‍ಗಳಲ್ಲಿ ಲಸಿಕೆ ಹಾಕಬೇಡಿ ಅಂತಾ ಭೋಧಿಸ್ತಾ ಇದ್ದಾರೆ ಅಂತಾ… ಹೀಗೆ ತಲೆಬುಡವಿಲ್ಲದ ಸಮರ್ಥನೆ ಮಾಡಲು ಹೊರಟು ಸ್ವತಃ ಅವರೇ ಪೇಚಿಗೆ ಸಿಲುಕುತ್ತಿದ್ದಾರೆ.. ಬಿಜೆಪಿಯ ಆರೋಪಗಳಲ್ಲಿ ಹುರುಳಿಲ್ಲ. ತಲೆಬುಡವಿಲ್ಲ ಅನ್ನೋದು ತಕ್ಷಣಕ್ಕೆ ಗೊತ್ತಾಗುತ್ತಿದೆ. ಕಾಂಗ್ರೆಸ್ ಟೂಲ್‍ಕಿಟ್ ಮ್ಯಾನುಪಲೇಟೆಡ್ ಮೀಡಿಯಾ ಅಂದರೆ ತಿದ್ದಿರುವ ಸುಳ್ಳು ಸುದ್ದಿ ಅಂತ ಟ್ವಿಟ್ಟರ್ ಹೇಳುತ್ತಿದ್ದಂತೆ ಆಡಳಿತಪಕ್ಷ ಈಗ ಪೇಚಿಗೆ ಸಿಲುಕಿದೆ. ಚರ್ಚ್‍ಗಳಲ್ಲಿ ವಿರೋಧಿ ಅಭಿಯಾನ ನಡೆದಿರುವುದಕ್ಕೆ ಸರಿಯಾಗಿ ದಾಖಲೆ ಇಲ್ಲದೇ ಬಿಜೆಪಿ ಮುಖಂಡರು ಅಸಹಾಯಕರಾಗಿದ್ದಾರೆ. ಆದರೆ ಇದೇ ರೀತಿಯ ಅಭಿಯಾನದಲ್ಲಿ ಪಳಗಿರುವ ಬಿಜೆಪಿಯಿಂದ ಇಂತಹ ಇನ್ನಷ್ಟು ದಿಕ್ಕು ತಪ್ಪಿಸುವ ಹೇಳಿಕೆಗಳು, ಸುದ್ದಿಯನ್ನು ಹರಡಿ ಜನರನ್ನು ಗೊಂದಲಕ್ಕೆ ತಳ್ಳಿದರೂ ಅಚ್ಚರಿಯೇನೂ ಇಲ್ಲ.

ಕೊನೆಯದಾಗಿ ಹೇಳಬೇಕಾದ್ದು ಇಷ್ಟೆ.. ಆಗಿದ್ದು ಆಗಿ ಹೋಗಿದೆ, ತಪ್ಪಾಗಿದೆ.. ಆದ ತಪ್ಪಿಗೆ ಪಶ್ಚಾತ್ತಾಪಪಟ್ಟು, ಪ್ರಾಯಶ್ಚಿತ ಎಂಬಂತೆ ಇನ್ನಾದರೂ ಸಕಾರಾತ್ಮಕ ವಿಚಾರಗಳ ಕಡೆಗೆ ಆಡಳಿತ ಪಕ್ಷ ಗಮನಹರಿಸುವುದು ಒಳ್ಳೆಯದು.. ಆ ಮೂಲಕ ಆಗಬಹುದಾದ ಇನ್ನಷ್ಟು ಸಾವು-ನೋವುಗಳನ್ನು ತಡೆದು ತಮ್ಮನ್ನು ನಂಬಿರುವ ದೇಶದ ಜನತೆಯ ಮನಗೆಲ್ಲಬೇಕಿದೆ… ಕನಿಷ್ಠ ಮತಹಾಕಿದ ಪಕ್ಷದ ಅಭಿಮಾನಿಗಳ ವಿಶ್ವಾಸವಾದರೂ ಉಳಿಸಿಕೊಳ್ಳಬೇಕಿದೆ.

[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]

Advertisement
Advertisement