Friday, 15th November 2019

ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು – ರೋಹಿತ್ ಶರ್ಮಾ

ಬೆಂಗಳೂರು: ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು ಎಂದು ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತಿದೆ. ಈ ಮೂಲಕ ವಿಶ್ವಕಪ್ ಗೆಲ್ಲುವ ಅಸೆ ಮೂಡಿಸಿದ್ದ ಭಾರತ ಪ್ರಮುಖ ಹಂತದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಟೂರ್ನಿಯಿಂದ ಹೊರಬಿತ್ತು.

ವಿಶ್ವಕಪ್‍ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ರೋಹಿತ್ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 1 ರನ್ ಹೊಡೆದು ಔಟ್ ಆಗಿದ್ದರು. ಈಗ ಈ ಪಂದ್ಯದ ಸೋತಿದ್ದಕ್ಕ ಬೇಸರದಿಂದ ಟ್ವೀಟ್ ಮಾಡಿರುವ ಅವರು “ಬುಧವಾರ 30 ನಿಮಿಷದ ಕಳಪೆ ಆಟದಿಂದ, ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು. ಈ ಕಳಪೆ ಆಟದಿಂದ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆವು. ನನ್ನ ಹೃದಯ ತುಂಬ ಭಾರ ಎನ್ನಿಸುತ್ತಿದೆ. ನನಗೆ ಗೊತ್ತು ನಿಮಗೂ ಹಾಗೇ ಆಗಿದೆ. ಹೊರ ದೇಶದಲ್ಲೂ ನಿಮ್ಮ ಬೆಂಬಲ ಅದ್ಭುತವಾಗಿತ್ತು. ನಾವು ಆಡಿದ ಪಂದ್ಯದ ಎಲ್ಲಾ ಮೈದಾನಗಳನ್ನು ನೀಲಿಮಯ ಮಾಡಿದಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಭಾರತ ಸೆಮಿಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದಾಗ ಸಂತಸದಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದ್ದ ರೋಹಿತ್ ಭಾರತ ಸೋತ ಕ್ಷಣ ಡ್ರೆಸ್ಸಿಂಗ್ ರೂಮ್‍ನಲ್ಲಿ ಬೇಸರದಿಂದ ನಿಂತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಟೂರ್ನಿ ಎಲ್ಲಾ ಪಂದ್ಯಗಳಲ್ಲೂ ಉತ್ತಮವಾಗಿ ಆಡಿದ್ದ ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ನ್ಯೂಜಿಲೆಂಡ್ ವೇಗಿ ಲ್ಯಾಥಮ್ ಹೆನ್ರಿ ಅವರ ಮೊದಲ ಓವರಿನ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ ಟಾಮ್ ಲಾಥಮ್ ಅವರಿಗೆ ಕ್ಯಾಚ್ ನೀಡಿ ಔಟ್ ಆದರು.

ವಿಶ್ವಕಪ್‍ನಲ್ಲಿ ಒಟ್ಟು 9 ಪಂದ್ಯಗಳಲ್ಲಿ 648 ರನ್ ಗಳಿಸಿರುವ ರೋಹಿತ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. 647ರನ್ ಗಳಿಸಿರುವ ಆಸ್ಟ್ರೇಲಿಯಾ ಅರಂಭಿಕ ಆಟಗಾರ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್‍ನ ಒಂದೇ ಆವೃತ್ತಿಯಲ್ಲಿ 5 ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿರುವ ಭಾರತದ ಮಾಜಿ ನಾಯಕ ಸಚಿನ್ ಅವರು, ವಿಶ್ವಕಪ್‍ನ್ನು ಭಾರತ ಅಂತ್ಯಗೊಳಿಸಿದ ಹಾದಿ ರೋಹಿತ್ ಶರ್ಮಾಗೆ ಅತ್ಯಂತ ನೋವು ಆಗಿರುತ್ತದೆ. ತುಂಬ ನಿರಾಶೆಯಾಗಿರುವ ರೋಹಿತ್ ಇದರಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *