Advertisements

35 ಲಕ್ಷ ಪಾವತಿ ಮಾಡಿ 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್‌ಐ ಅಕ್ರಮ ಲೀಕ್‌ ಆಗಿದ್ದು ಹೇಗೆ?

ಕಲಬುರಗಿ: 35 ಲಕ್ಷ ಮುಂಗಡ ಪಾವತಿ. ಉಳಿದ ಹಣಕ್ಕೆ ಬೇಡಿಕೆ. ಬೇಡಿಕೆ ಈಡೇರಿಸದ್ದಕ್ಕೆ ಪ್ರಶ್ನೆ ಪತ್ರಿಕೆಯ ಅಕ್ರಮ ವ್ಯವಹಾರ ಔಟ್‌. ಇದು ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌( ಪಿಎಸ್‌ಐ) ಹುದ್ದೆಗಳ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಒಂದು ಪ್ಯಾರಾ ಸ್ಟೋರಿ.

Advertisements

ಹೌದು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್‌ ಆಗುವುದು ಗೊತ್ತು. ಆದರೆ ಇಲ್ಲಿ ಪ್ರಶ್ನೆ ಪತ್ರಿಕೆ ಅಲ್ಲ. ಒಎಂಆರ್‌ ಶೀಟ್‌ನಲ್ಲೇ ಗೋಲ್ಮಾಲ್‌ ಮಾಡಲಾಗಿದೆ. ಈ ಕೃತ್ಯಕ್ಕೆ ಸಹಕಾರ ನೀಡಿದ ಸ್ನೇಹಿತನಿಂದಲೇ ಈಗ ಈ ಅಕ್ರಮ ಬಯಲಾಗಿರುವುದು ವಿಶೇಷ.

Advertisements

ಅಕ್ರಮ ಎಸಗಿದ್ದು ಹೇಗೆ?
2021ರ ಅಕ್ಟೋಬರ್‌ 3 ರಂದು ರಾಜ್ಯಾದ್ಯಂತ ಪಿಎಸ್‌ಐ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಮತ್ತು ತಂಡ ಹಣ ಬಲ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿತ್ತು. ಲಕ್ಷಾಂತರ ರೂ. ನೀಡಿದವರ ಪರವಾಗಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಸಹಕಾರ ನೀಡಿತ್ತು. ಪರೀಕ್ಷೆ ಮುಗಿದ ಬಳಿಕ ಕ್ಯಾಮೆರಾವನ್ನು ಬಂದ್‌ ಮಾಡಿ ಬಳಿಕ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗೆ ಸರಿ ಉತ್ತರವನ್ನು ಭರ್ತಿ ಮಾಡಲಾಗಿತ್ತು.

ಬೆಳಕಿಗೆ ಬಂದಿದ್ದು ಹೇಗೆ?
ಬಂಧನಕ್ಕೆ ಒಳಗಾದ ವೀರೇಶ್‌ಗೂ ಜ್ಞಾನ ಜ್ಯೋತಿ ಶಾಲೆಯೇ ಪರೀಕ್ಷೆ ಕೇಂದ್ರವಾಗಿತ್ತು. ವೀರೇಶ್ ಜ್ಞಾನ ಜ್ಯೋತಿ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿಚಾರ ತಿಳಿದ ಆತನ ಸ್ನೇಹಿತ, ಜ್ಞಾನಜ್ಯೋತಿ ಕೇಂದ್ರವನ್ನೇ ಬಹಳ ಜನ ಇಷ್ಟಪಟ್ಟು ಆಯ್ಕೆ ಮಾಡುತ್ತಾರೆ. ಆದರೆ ನಿನ್ನ ಅದೃಷ್ಟದಿಂದ ಜ್ಞಾನ ಜ್ಯೋತಿ ಶಾಲೆಯ ಸೆಂಟರ್ ‌ಸಿಕ್ಕಿದೆ ಎಂದು ಹೇಳಿದ್ದ.

Advertisements

ಈ ವಿಚಾರ ತಿಳಿದ ವೀರೇಶ್ ಕುತೂಹಲದಿಂದ ಜ್ಞಾನ ಜ್ಯೋತಿ ಕೇಂದ್ರದ ಬಗ್ಗೆ ವಿಚಾರಿಸಿದ್ದ. ಆಗ ಪಿಎಸ್ಐ ಪರೀಕ್ಷೆಯಲ್ಲಿ ಹಣ ನೀಡಿದರೆ ನೌಕರಿ ಖಂಡಿತ ಸಿಗುತ್ತೆ ಎಂದು ಸ್ನೇಹಿತ ವೀರೇಶನನ್ನು ಸ್ನೇಹಿತ ನಂಬಿಸಿದ್ದ. ಸ್ನೇಹಿತನ ಮಾತನ್ನು ಕೇಳಿದ ವೀರೇಶ್‌ ಎಷ್ಟು ಬೇಕಾದರೂ ಹಣ ನೀಡುತ್ತೇನೆ. ಏನಾದರೂ ಮಾಡಿ ಪರೀಕ್ಷೆಯಲ್ಲಿ ಪಾಸ್‌ ಮಾಡು ಎಂದು ಬೇಡಿಕೊಂಡಿದ್ದ. ವೀರೇಶನ ಮನವಿಯಂತೆ ಸ್ನೇಹಿತ ಅಕ್ರಮದ ಕಿಂಗ್‌ಪಿನ್‌ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ವಿರೇಶ್ ಕಿಂಗ್‌ಪಿನ್ ಜೊತೆ ಸೇರಿಕೊಂಡು ಪಿಎಸ್ಐ ನೌಕರಿಯ ಡೀಲ್‌ ಅನ್ನು 80 ಲಕ್ಷಕ್ಕೆ ಕುದುರಿಸಿದ್ದ. ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಆಲೋಚನೆ ಇಲ್ಲ: ಸುನಿಲ್‍ ಕುಮಾರ್

ಈ ಡೀಲ್‌ನಂತೆ ಪರೀಕ್ಷೆಗೂ ಮುನ್ನವೇ ವೀರೇಶ್‌ 35 ಲಕ್ಷ ರೂ. ಹಣವನ್ನು ಪಾವತಿಸಿದ್ದ. ಹಣ ಕೊಟ್ಟ ಬಳಿಕ ವೀರೇಶ್‌ ಪರೀಕ್ಷೆಯಲ್ಲಿ ಕೇವಲ 20 ಅಂಕಕ್ಕೆ ಉತ್ತರ ಬರೆದಿದ್ದ. ಆದರೆ ಪರೀಕ್ಷಾ ಫಲಿತಾಂಶದ ವೇಳೆ 121 ಅಂಕ ಬಂದಿತ್ತು. ಇಷ್ಟೊಂದು ಅಂಕ ಬಂದ ಕಾರಣ ಸ್ನೇಹಿತ ವೀರೇಶ್ ಬಳಿ ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.

ನೀನು ಪಿಎಸ್ಐ ಆಗಲು ದಾರಿ ಹೇಳಿ ಕೊಟ್ಟವನು ನಾನು. ಹಾಗಾಗಿ ಹಣವನ್ನು ಸಂದಾಯ ಮಾಡು. ಕನಿಷ್ಟ ಐದು ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ದ. ಆದರೆ ವೀರೇಶ್‌ ಬಳಿ ಇಷ್ಟೊಂದು ಹಣ ಇರಲಿಲ್ಲ.

ಹಣ ಕೊಡದೇ ಇದ್ದಾಗ ವಿರೇಶ್ ಸ್ನೇಹಿತನೇ ಆತನ ಒಎಂಆರ್ ಶೀಟ್ ಬೇರೆ ಅಭ್ಯರ್ಥಿಗಳಿಗೆ ಶೇರ್ ಮಾಡಿ ಅಕ್ರಮದ ಬಗ್ಗೆ ಬಾಯಿ ಬಿಟ್ಟಿದ್ದ. ಆಗ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಎಂದು ತಿಳಿದು ಉಳಿದ ಅಭ್ಯರ್ಥಿಗಳು ಸಿಎಂ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದರು. ಅಭ್ಯರ್ಥಿಗಳು ಸಲ್ಲಿಸಿದ ದೂರಿನ ಆಧಾರದ ಮೇಲೆ ಸರ್ಕಾರ ಅಕ್ರಮದ‌ ತನಿಖೆಯನ್ನು ಸಿಐಡಿ ಹೆಗಲಿಗೆ ನೀಡಿತ್ತು.

ಸಿಐಡಿ ಅಧಿಕಾರಿಗಳು ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಮೊದಲು ಬಂಧಿಸಿದ್ದೆ ವೀರೇಶನನ್ನು. ವೀರೇಶ್ ಬಂಧನದ ಬಳಿಕ ಅಕ್ರಮದ ಬಗ್ಗೆ ಒಂದೊಂದೇ ಮಾಹಿತಿ ಬಹಿರಂಗವಾಗತೊಡಗಿತು. ವೀರೇಶ್‌ನಂತೆ ಇನ್ನೂ ಹಲವಾರು ಅಭ್ಯರ್ಥಿಗಳು ಕಿಂಗ್‌ ಪಿನ್ ಗೆ ಹಣ ನೀಡಿದ್ದರು. ಇದನ್ನೂ ಓದಿ: ಮಠಕ್ಕೆ ನಾನು ಸಿಎಂ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಬೊಮ್ಮಾಯಿ

ಕೋಟಿ ಕೋಟಿ ಹಣ ಪಡೆದ ಕಿಂಗ್‌ ಪಿನ್ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದ. ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೂ ಪಾಲು ಸಂದಾಯ ಆಗಿದ್ದು, ಅದಕ್ಕಾಗಿಯೇ ಜ್ಞಾನ ಜ್ಯೋತಿ ಶಾಲೆಯ ಮೇಲ್ವಿಚಾರಕರರಿಗೆ ನಾಲ್ಕು ಸಾವಿರ ರೂ. ಹಣವನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಕ್ರಮದ‌ ಬೆಳಕಿಗೆ ಬಂದಂತೆ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು ದಿವ್ಯಾ ಬಂಧನದ ಬಳಿಕವಷ್ಟೇ ಕಿಂಗ್ ಪಿನ್ ಪೂರ್ಣ  ಮಾಹಿತಿ ಹೊರ ಬರಲಿದೆ.

ವೀರೇಶನಿಗೆ ಸಹಾಯ ಮಾಡಿದ್ದ ಸ್ನೇಹಿತ ಸಹ ಪರೀಕ್ಷೆ ಬರೆದಿದ್ದಾನೆ. ಆತ ಯಾರು? ಯಾವ ಕೇಂದ್ರದಲ್ಲಿ ಬರೆದಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Advertisements
Exit mobile version