Connect with us

Bengaluru City

ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗಿದೆ- ಪರಮೇಶ್ವರ್

Published

on

– ಎಕ್ಸಿಟ್ ಪೋಲ್‍ನಲ್ಲಿ ವಿಶ್ವಾಸವಿಲ್ಲ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ವಾಸ್ತವ ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತದೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟವಾದ ಚಿತ್ರಣ ಗೊತ್ತಾಗುತ್ತದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. ಭಾನುವಾರ ದೆಹಲಿ ಸಭೆಯಲ್ಲೂ ಚರ್ಚೆ ಮಾಡಿದ್ದೇವೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಯುಪಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರುತ್ತದೆ ಅಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನನಗೆ ಎಕ್ಸಿಟ್ ಪೋಲ್‍ನಲ್ಲಿ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ 20 ಕ್ಷೇತ್ರದಲ್ಲಿ ಗೆಲ್ಲಲಿದ್ದೇವೆ. ಇದು ನಮ್ಮ ಲೆಕ್ಕಾಚಾರ, ವಾತಾವರಣ ಕೂಡ ಹಾಗೆ ಇದೆ. ಚುನಾವಣಾ ಪ್ರಚಾರ ಆಧರಿಸಿ ನಾವು ಹೇಳುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ 18 ಸೀಟು ಬಿಜೆಪಿಗೆ ಬರುತ್ತದೆ ಎನ್ನುವುದರಲ್ಲಿ ಅರ್ಥ ಏನಿದೆ ಎಂದರು.

ಸಮೀಕ್ಷೆಯಂತೆ ಫಲಿತಾಂಶ ಬಂದರೆ ದೋಸ್ತಿಗಳ ಮೇಲೆ ಪರಿಣಾಮ ಬೀರಲ್ಲ. ಫಲಿತಾಂಶ ಹಾಗೆ ಆಗೋದಕ್ಕೆ ಸಾಧ್ಯವಿಲ್ಲ ಅಂದ ಮೇಲೆ ನಾನು ಯಾವುದೇ ಊಹೆ ಮಾಡುವುದಕ್ಕೆ ಹೋಗುವುದಿಲ್ಲ. ರಾಜಕಾರಣ ಹೇಗಿರುತ್ತದೆ ಅಂದರೆ ಪರಿಸ್ಥಿತಿ ಫಲಿತಾಂಶ ಬಂದರೆ ಯಾವ್ಯಾವ ಲೆಕ್ಕಾಚಾರ ಯಾರು ಹಾಕಿದ್ದಾರೆ ನೋಡಬೇಕು. ಆದರೆ ಸರ್ಕಾರವಂತೂ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವಿಎಂ ಹ್ಯಾಕ್ ಬಗ್ಗೆ ಇಡೀ ದೇಶದಲ್ಲಿ ಮಾತುಗಳಿವೆ. ಕಳೆದ ಬಾರಿ ಕೂಡ ಅದನ್ನು ಮಾತನಾಡಿದ್ದೆವು. ಕಾಂಗ್ರೆಸ್ ನೇತೃತ್ವದಲ್ಲಿ ಅನೇಕ ಪಕ್ಷಗಳು ರಾಷ್ಟ್ರಪತಿ ಹಾಗೂ ಎಲೆಕ್ಷನ್ ಕಮೀಷನ್ ಭೇಟಿ ಮಾಡಿದೆವು. ಬ್ಯಾಲೆಟ್ ಪೇಪರ್ ಬೇಕು ಎಂದು ಹೇಳಿದ್ವಿ. ಅದನ್ನು ಕೂಡ ಅವರು ತಳ್ಳಿ ಹಾಕಿದ್ದಾರೆ. ಬಹಳಷ್ಟು ಜನ ಇವಿಎಂ ಹ್ಯಾಕ್ ಆಗೋದನ್ನು ತೋರಿಸಿಕೊಟ್ಟಿದ್ದಾರೆ. ನಮಗೂ ಕೂಡ ಅದೇ ರೀತಿಯ ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನೋಡಿದರೆ ಯಾವ ರೀತಿ ಆಗುತ್ತದೆ ಎಂದು ಹೇಳಳು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.