Friday, 15th November 2019

Recent News

ಶ್ರೀಮಂತ್ ಪಾಟೀಲ್ ಎಸ್ಕೇಪ್ ಆಗಿದ್ದು ಹೇಗೆ?

ಬೆಂಗಳೂರು: ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟಿನಿಂದ ಹೊರಬಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಸಕ ಶ್ರೀಮಂತ್ ಪಾಟೀಲ್ ಎಸ್ಕೇಪ್ ಆಗಿದ್ದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಪಾಟೀಲ್ ರೆಸಾರ್ಟಿನಿಂದ ಹೊರಹೋಗುತ್ತಿರುವ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಶ್ರೀಮಂತ್ ಪಾಟೀಲ್ ಅವರು ಬುಧವಾರ ರಾತ್ರಿ 8.30ಕ್ಕೆ ವ್ಯಕ್ತಿಯೊಬ್ಬನ ಜೊತೆ ಎಸ್ಕೇಪ್ ಆಗಿದ್ದಾರೆ. ಸೈಲೆಂಟಾಗಿ, ಆರಾಮಾಗಿ ಪ್ರಕೃತಿ ರೆಸಾರ್ಟಿನಿಂದ ಹೊರಗೆ ಹೋಗುತ್ತಿರುವುದನ್ನು ನಾವು ದೃಶ್ಯದಲ್ಲಿ ನೋಡಬಹುದಾಗಿದೆ. ಸಂಜೆ ಸಿದ್ದರಾಮಯ್ಯ ಜೊತೆ ಫುಲ್ ಬಿಂದಾಸ್ ಆಗಿದ್ದ ಶ್ರೀಮಂತ್ ಪಾಟೀಲ್, ಶುಕ್ರವಾರ ಬೆಳಗ್ಗೆ ಮುಂಬೈ ಆಸ್ಪತ್ರೆ ಬೆಡ್ ಮೇಲೆ ಕಾಣಿಸಿಕೊಂಡಿದ್ದರು.

ನಡೆದಿದ್ದೇನು?
ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ಖುದ್ದಾಗಿ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ಬುಧವಾರ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವುದು ತಿಳಿಯಲಿಲ್ಲ. ಹೀಗಾಗಿ ತಕ್ಷಣವೇ ಅಲ್ಲಿಂದ ಮುಂಬೈಗೆ ಬಂದೆವು ಎಂದು ಶಾಸಕರು ಹೇಳಿದ್ದರು.

ಮುಂಬೈನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ. ಆದರೆ ವೈದ್ಯರು ನೀವು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿ, ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಇನ್ನೂ ಸ್ವಲ್ಪ ಎದೆ ನೋವು ಇದೆ ಎಂದು ಶಾಸಕರು ತಿಳಿಸಿದ್ದರು.

ಶ್ರೀಮಂತ್ ಪಾಟೀಲ್ ಅವರು ಗುರುವಾರ ನಡೆದ ವಿಶ್ವಾಸ ಮತಯಾಚನೆಯ ಚರ್ಚೆಗೆ ಹಾಜರಾಗಿರಲಿಲ್ಲ. ಹೀಗಾಗಿ ಬಿಜೆಪಿಯವರೇ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಮೈತ್ರಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋಗಳನ್ನು ಹಿಡಿದು, ಇದು ಸುಳ್ಳು ಎಂದು ಹೇಳಿದ್ದರು.

Leave a Reply

Your email address will not be published. Required fields are marked *