Wednesday, 29th January 2020

Recent News

ಜೆಡಿಎಸ್ ಪಾದಯಾತ್ರೆಗೆ ತಾತನ ಬದ್ಲು ಮೊಮ್ಮಗನ ಸಾರಥ್ಯ

– ಮಂಡ್ಯದಲ್ಲಿ ನಿಖಿಲ್ ಮನೆ ಪ್ಲಾನ್‍ಗೆ ಆಷಾಢ ಅಡ್ಡಿ

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಆಘಾತದ ಬಳಿಕ ಪಕ್ಷದ ಸಂಘಟನೆಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಪಾದಯಾತ್ರೆ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಆಗಸ್ಟ್ 20ರಿಂದ ಆರಂಭವಾಗಲಿರುವ ಪಕ್ಷ ಕಟ್ಟುವ ಕಾಲ್ನಡಿಗೆಯ ನೇತೃತ್ವವನ್ನು ಮಾಜಿ ಪ್ರಧಾನಿ ವಹಿಸಿಕೊಳ್ಳುವ ಸಾಧ್ಯತೆ ವಿರಳ. ಬದಲಿಗೆ ಕಿರಿ ಮೊಮ್ಮಗ ನಿಖಿಲ್ ಹೆಗಲಿಗೆ ಹಾಕುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಆಷಾಢ ಅಡ್ಡಿ:
ಮೈಸೂರಿನ ನಂಜನಗೂಡಿನಿಂದ ಶುರುವಾಗಲಿರುವ ಪಾದಯಾತ್ರೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕೊನೆಯಾಗಲಿದೆ. ಇತ್ತ ಮಂಡ್ಯದಲ್ಲಿ ನಿಖಿಲ್ ಮನೆ ಮಾಡುವುದು ಇನ್ನೊಂದು ತಿಂಗಳು ತಡವಾಗಲಿದೆ. ಜುಲೈ 2ರಿಂದ ಆಷಾಢ ಶುರುವಾಗಲಿದ್ದು, ಈ ಮಾಸದಲ್ಲಿ ಮನೆ, ಭೂಮಿ ಖರೀದಿ ಮಾಡಬಾರದು ಅನ್ನೋದು ಸಂಪ್ರದಾಯದ ಹಿನ್ನೆಲೆಯಲ್ಲಿ ಮನೆ ಮಾಡುವುದು ತಡವಾಗಲಿದೆ.

ಪಕ್ಷ ಸಂಘಟನೆಗಾಗಿ ಪಾದಯಾತ್ರೆ:
ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದ ದೇವೇಗೌಡರು, ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದರು. ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೇ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.

Leave a Reply

Your email address will not be published. Required fields are marked *