Latest
ಬಿಜೆಪಿ ಮಾಜಿ ಎಂಎಲ್ಸಿಯಿಂದ ಸೇನೆಗೆ 20 ಲಕ್ಷ ರೂ. ಮೌಲ್ಯದ ಆಭರಣ ದೇಣಿಗೆ!

ನಾಸಿಕ್: ಭಾರತೀಯ ಜನತಾ ಪಕ್ಷದ ಮಾಜಿ ಎಂಎಲ್ಸಿ ನಿಶಿಗಂಧಾ ಮೊಗಲ್ ಅವರು ಭಾರತೀಯ ಸೇನೆಗೆ ಚಿನ್ನದ ಆಭರಣಗಳನ್ನು ದೇಣಿಗೆ ನೀಡುವ ಮೂಲಕ ದೇಶ ಭಕ್ತಿ ಮೆರೆದಿದ್ದಾರೆ.
ನಿಶಿಗಂಧಾ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಈ ಮಹಾನ್ ಕೆಲಸವೊಂದನ್ನು ಮಾಡಿದ್ದಾರೆ. ತಮ್ಮ 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಭಾರತೀಯ ಸೈನ್ಯಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿನ್ನಾಭರಣಗಳನ್ನು ಯುದ್ಧ ಹಾಗೂ ಇನ್ನಿತರ ಹೋರಾಟಗಳಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಹಾಗೂ ನಿವೃತ್ತ ಯೋಧರ ಅನುಕೂಲಕ್ಕಾಗಿ ಬಳಸುವಂತೆ ನಿಶಿಗಂಧಾ ತಿಳಿಸಿದ್ದಾರೆ.
ಇತ್ತ ನಿಶಿಗಂಧಾ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕೂಡ ಬರೆದಿದ್ದಾರೆ. ನಮ್ಮ ದೇಶದ ಸೇನೆ ಹಾಗೂ ಸೈನಿಕರಿಗೆ ತಾನು ಏನಾದರೂ ಒಳ್ಳೆಯದು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆ. ಈ ವೇಳೆ ಆಭರಣಗಳನ್ನು ದಾನ ಮಾಡಿದರೆ ಹೇಗೆ ಎಂಬ ಆಲೋಚನೆ ಉಂಟಾಯಿತು. ಅಲ್ಲದೆ ಚಿನ್ನಾಭರಣಗಳನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದೆ ಎಂದ ಅವರು, ಈ ಸಂಬಂಧ ಪ್ರಧಾನಿ ಪತ್ರ ಬರೆದಿರುವುದು ನಿಜಕ್ಕೂ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ನಿಶಿಗಂಧಾ ಹೇಳಿದರು.
ನಿಶಿಗಂಧಾ ಅವರು 1996 ರಿಂದ 2000 ವರೆಗೆ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸಿದ್ದರು. ನನ್ನ ಜೀವನದುದ್ದಕ್ಕೂ ದೇಶ ಕಾಯುವ ಯೋಧರಿಗಾಗಿ ಏನಾದರೂ ಕೊಡುಗೆ ನಿಡಬೇಕು ಎಂಬ ಕನಸು ಕಂಡಿದ್ದು, ಸದ್ಯ ಅದನ್ನು ಘೋಷಣೆ ಕೂಡ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಕುಟುಂಬ ಕೂಡ ಬೆಂಬಲವಾಗಿ ನಿಂತಿದ್ದು, ತುಂಬಾನೇ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
