Connect with us

Bengaluru City

ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದ್ದಾರೆ ಅರ್ಥವಾಗಿಲ್ಲ- ಸಿದ್ದರಾಮಯ್ಯ

Published

on

ಬೆಂಗಳೂರು/ಮೈಸೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಿರುದ್ಧದ ಸಮರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೂಡ ಮುಂದುವರಿಸಿದ್ದಾರೆ.

ಇಂದು ಟ್ವೀಟ್ ಮಾಡಿರುವ ಮಾಜಿ ಸಿಎಂ, ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ ಎಂದು ಅರ್ಥವಾಗಿಲ್ಲ. ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು ಎಂದು ಬರೆದು ಸಿಟಿ ರವಿಗೆ ಟ್ಯಾಗ್ ಮಾಡಿದ್ದಾರೆ.

ಅಲ್ಲದೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಸಿ.ಟಿ ರವಿ ಒಬ್ಬ ಯಕಶ್ಚಿತ್ ರಾಜಕಾರಣಿ. ನಾನು ಹಿಂದೂಗಳಿಗೆ ಭಾರತ ರತ್ನ ಕೊಡಬೇಡಿ ಎಂದು ಹೇಳಿಲ್ಲ. ಯಾಕೆಂದರೆ ನಾನು ಕೂಡ ಒಬ್ಬ ಹಿಂದೂ. ಹಿಂದುತ್ವದ ಮೂಲಕ ಕೋಮುವಾದ ಬಿತ್ತುವವರಿಗೆ ಭಾರತರತ್ನ ಬೇಡ. ಹಾಗೆಯೇ ಹಿಂದೂ ಹೆಸರಿನಲ್ಲಿ ಬೆಂಕಿ ಹಚ್ಚುವವರಿಗೆ ಬೇಡ ಅಂತ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಗಾಂಧಿಯನ್ನು ಕೊಂದ ಆರೋಪಿಗೆ ಭಾರತ ರತ್ನ ಬೇಡ ಅಂತ ಹೇಳಿದ್ದೆ. ಆದರೆ ಅದಕ್ಕೆ ಎಲ್ಲರೂ ನನ್ನ ಮೇಲೆ ಮುಗಿ ಬಿದ್ದರು. ನಾನು ಸತ್ಯವನ್ನು ಹೇಳಿದ್ದೇನೆ. ನಾನು ಸತ್ಯ ಹೇಳಿರುವುದಕ್ಕೆ ಎಲ್ಲರೂ ನನ್ನ ಮೇಲೆ ಮುಗಿ ಬಿದ್ದಿದ್ದಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ ಅವರ ಮಧ್ಯೆ ಶನಿವಾರ ಬೆಳಗ್ಗಿನಿಂದಲೇ ಟ್ವೀಟ್ ವಾರ್ ಆರಂಭವಾಗಿತ್ತು. ಟ್ವೀಟ್ ಮೂಲಕವೇ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ಈ ಮಧ್ಯೆ ಸಚಿವರು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು.