ಶಿವಮೊಗ್ಗ : ರಾಜ್ಯದಲ್ಲಿ ಅಹಿಂದ ವರ್ಗ ಕಾಂಗ್ರೆಸ್ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಕಳೆದ 70 ವರ್ಷಗಳಿಂದಲೂ ಅಹಿಂದವನ್ನು ಕೇವಲ ಮತ ಬ್ಯಾಂಕಿಗಾಗಿ ಮಾತ್ರ ಬಳಸಿಕೊಂಡಿದೆ. ಹೀಗಾಗಿ ಅಹಿಂದ ವರ್ಗ ಇದೀಗ ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ನಿಂದ ಹೊರಗೆ ಬರಲಾರಂಭಿಸಿದೆ ಎಂದರು.
ಸ್ವತಂತ್ರ ಪೂರ್ವದಿಂದಲೂ ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಹೋಗಲಾಡಿಸಲು ನಾನು ಕುರುಬ ಸಮುದಾಯದ ಪರವಾಗಿ ಎಸ್‍ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದೇನೆ ಎಂದರು.
ಅಹಿಂದ ನಾಯಕ ಎಂದು ಕರೆಸಿಕೊಳ್ಳುತ್ತೀರಿ ಕುರುಬರ ಎಸ್‍ಟಿ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿರುವ ಸಚಿವರು, ನೀವೆ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿಯೇ ಕುರುಬ ಸಮುದಾಯವನ್ನು ಎಸ್‍ಟಿ ಸೇರಿಸಬಹುದಿತ್ತು. ನಿಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ, ನೀವೇ ಮುಖ್ಯಮಂತ್ರಿ ಆಗಿದ್ದಾಗ ಏನು ಮಂಡಕ್ಕಿ ತಿನ್ನುತ್ತಿದ್ರ ಎಂದು ಸಚಿವ ಈಶ್ವರಪ್ಪ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.