Connect with us

Bengaluru City

ವಿದೇಶದಲ್ಲಿ ಭಾರೀ ಹೂಡಿಕೆ – ಜಾರ್ಜ್‌ಗೆ ಇಡಿಯಿಂದ ಸಮನ್ಸ್ ಜಾರಿ

Published

on

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ ವಿದೇಶಕ್ಕೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪವನ್ನು ಜಾರ್ಜ್ ಎದುರಿಸ್ತಿದ್ದು, ಈ ಸಂಬಂಧ ಜನವರಿ 16ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಡಿ.23ರಂದೇ ಸಮನ್ಸ್ ಕೊಟ್ಟಿರೋ ಇಡಿ, ಜಾರ್ಜ್ ಪತ್ನಿ, ಪುತ್ರ ರಾಣಾ ಹಾಗೂ ಮಗಳ ಬ್ಯಾಂಕ್ ಖಾತೆಗಳು, ವ್ಯವಹಾರ, ಪಾಲುದಾರಿಕೆ ಬಗ್ಗೆಯೂ ವಿವರಣೆ ಕೇಳಿದೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿದ ಕೆಜೆ ಜಾರ್ಜ್, ತಮಗೆ ಸಮನ್ಸ್ ಬಂದಿದ್ದನ್ನು ಒಪ್ಪಿಕೊಂಡು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಆರೋಪ ಏನು?
ಮಂತ್ರಿ ಆಗಿದ್ದಾಗ ವಿದೇಶಕ್ಕೆ ಹಣ ವರ್ಗಾವಣೆ ಮಾಡಿ ಉದ್ಯಮ ನಡೆಸುತ್ತಿರುವುದರ ಬಗ್ಗೆ ಆರೋಪ ಕೇಳಿ ಬಂದಿದೆ. ನ್ಯೂಯಾರ್ಕ್ ನಲ್ಲಿ ಆಸ್ತಿ ಖರೀದಿಸಿದ್ದಾರೆ. ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ಹಾಂಕಾಂಗ್‍ನಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಪುತ್ರ ರಾಣಾ ಜಾರ್ಜ್ ಹೆಸರಿನಲ್ಲಿ ನ್ಯೂಯಾರ್ಕ್ ನಲ್ಲಿ ಆಸ್ತಿ ಖರೀದಿಸಿದ್ದರೆ ಪುತ್ರಿ ಹೆಸರಿನಲ್ಲಿ ಆಸ್ಟ್ರೇಲಿಯಾದಲ್ಲಿ ಪಂಚತಾರಾ ಹೋಟೆಲ್ ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಅಕ್ರಮವಾಗಿ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ, ಆಸ್ತಿ ವಿವರ ಘೋಷಣಾ ಪತ್ರದಲ್ಲಿ ಈ ಕುರಿತು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ಅಗಸ್ಟ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ರವಿ ಕೃಷ್ಣಾರೆಡ್ಡಿ, ಪ್ರಮುಖ ರಾಜಕೀಯ ನಾಯಕರು ತಮ್ಮ ಶಕ್ತಿ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗ ಇಡಿ ವಶದಲ್ಲಿರುವ ಡಿ.ಕೆ ಶಿವಕುಮಾರ್ ಮೇಲೆ ಸಹ ಈ ಬಗ್ಗೆ ನಾವು ಇಡಿಗೆ ದೂರು ನೀಡಿದ್ದೆವು. ಎರಡು ವರ್ಷದ ಹಿಂದೆಯೇ ದೂರು ನೀಡಿದ್ದೆವು ಆದರೆ, ನಿಧಾನವಾಗಿ ತನಿಖೆ ನಡೆಸಿ ಇಡಿ ಕ್ರಮ ಕೈಗೊಂಡಿದೆ. ಇಂದೂ ಸಹ ಅನೇಕ ಮಂತ್ರಿಗಳ ಮಕ್ಕಳ ಹೆಸರಲ್ಲಿ ನೂರಾರು ಕೋಟಿ ರೂ. ಆಸ್ತಿ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಮಕ್ಕಳ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ ಎಂದು ಆರೋಪಿಸಿದ್ದರು.

ಕೇರಳದಿಂದ ಕೊಡಗಿಗೆ ಬಂದು, ಸಣ್ಣ ಪುಟ್ಟ ಟಿಂಬರ್ ಕೆಲಸ ಮಾಡಿಕೊಂಡಿದ್ದ ಜಾರ್ಜ್ ನಂತರ ರಾಜಕಾರಣ ಮಾಡಿಕೊಂಡು ಬೆಂಗಳೂರಿಗೆ ಬಂದು ಇಷ್ಟೆಲ್ಲ ಆಸ್ತಿ ಸಂಪಾದಿಸಿದ್ದಾರೆ. ಕೆ.ಜೆ ಜಾರ್ಜ್ ಇದೀಗ ಸಾವಿರಾರು ಕೋಟಿ ರೂ.ಗಳ ಆಸ್ತಿಯ ಒಡೆಯ. ಅವರ ಮಗನ ಹೆಸರಿನಲ್ಲಿ ಬೇನಾಮಿ ಆಸ್ತಿ ಇದೆ. ಮಗಳ ಹೆಸರಿನಲ್ಲಿ ಅಮೆರಿಕದಲ್ಲಿ ಆಸ್ತಿ ಇದೆ. ಲೋಕಾಯುಕ್ತಕ್ಕೆ ಆಸ್ತಿ ಘೋಷಣೆ ಮಾಡುವಾಗ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ಆಸ್ಟ್ರೇಲಿಯಾದಲ್ಲಿ ಆಸ್ತಿ ಇದೆ ಎಂದು ನಮೂದಿಸಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸುವಾಗ ಈ ಆಸ್ತಿಗಳನ್ನು ಘೋಷಿಸಿಲ್ಲ ಎಂದು ತಿಳಿಸಿದ್ದರು.

ಜನ ಪ್ರತಿನಿಧಿಗಳು ಸಿಂಗಾಪುರ ಮಾರ್ಗವಾಗಿ ತಮ್ಮ ಎಲ್ಲ ವ್ಯವಹಾರಗಳನ್ನು ನಡೆಸುತ್ತಾರೆ. ಅಮೇರಿಕ, ಮಲೇಷ್ಯಾ, ಸಿಂಗಾಪುರ ಹೋಗುವುದು ಕೇವಲ ಕ್ಯಾಸಿನೋ ಆಡಿ ಮಜಾ ಮಾಡುವುದಕ್ಕಲ್ಲ. ತಮ್ಮ ಆಸ್ತಿಗಳನ್ನು ನಿರ್ವಹಿಸಿಕೊಂಡು ಬರಲು ಹೋಗುತ್ತಾರೆ. ತಾವು ಸಂಪಾದಿಸಿರುವ ಹಣವನ್ನು ಹವಾಲಾ ಮೂಲಕ ವಿದೇಶಗಳಿಗೆ ಸಾಗಿಸುತ್ತಾರೆ. ಹೀಗಾಗಿ ನೀವು ರಾಜಕಾರಣ ಮಾಡಿ ಇಲ್ಲವೇ ಕೈಗಾರಿಕೋದ್ಯಮಿ, ವ್ಯಾಪಾರಸ್ಥರಾಗುವುದು ಒಳ್ಳೆಯದು. ಆದರೆ ಎರಡೂ ಮಾಡುವುದು ಜನದ್ರೋಹದ ಕೆಲಸವಾಗಿದ್ದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಜನರ ದುಡ್ಡನ್ನು ವೈಯಕ್ತಿಕ ವಿಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ದೂರಿದ್ದರು.