Connect with us

ಮೂಡಿಗೆರೆ ಪಟ್ಟಣಕ್ಕೆ ಕಾಡಾನೆ ಎಂಟ್ರಿ- ಸ್ಥಳೀಯರಲ್ಲಿ ಆತಂಕ

ಮೂಡಿಗೆರೆ ಪಟ್ಟಣಕ್ಕೆ ಕಾಡಾನೆ ಎಂಟ್ರಿ- ಸ್ಥಳೀಯರಲ್ಲಿ ಆತಂಕ

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಇಷ್ಟು ದಿನಗಳ ಕಾಲ ತಾಲೂಕಿನ ಗ್ರಾಮೀಣ ಭಾಗದಲ್ಲಿದ್ದ ಕಾಡಾನೆ ಹಾವಳಿ ಇದೀಗ ತಾಲೂಕು ಕೇಂದ್ರಕ್ಕೂ ಬಂದಿರುವುದು ಆತಂಕಕ್ಕೀಡುಮಾಡಿದೆ. ಕಳೆದ ರಾತ್ರಿ ಮೂಡಿಗೆರೆ ಪಟ್ಟಣದ ಛತ್ರ ಮೈದಾನದ ರಾಜು ಅವರ ಮನೆ ಬಳಿಯೇ ಕಾಡಾನೆ ಸಂಚಾರ ಮಾಡಿದೆ. ಗಜರಾಜನ ಈ ಸೈಲೆಂಟ್ ವಾಕಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ 10ಕ್ಕೂ ಹೆಚ್ಚು ಕಾರುಗಳಿದ್ದರೂ ಹಾನಿ ಮಾಡದೆ ಒಂಟಿ ಸಲಗ ಸುತ್ತಾಡಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಬೆಳಗ್ಗೆ ಮೂಡಿಗೆರೆ ಪಟ್ಟಣದಲ್ಲಿ ಕಂಡ ಕಾಡಾನೆ, ಮಧ್ಯಾಹ್ನ ವೇಳೆಗೆ ಪಟ್ಟಣದ ಹೊರಭಾಗದಲ್ಲಿ ತೋಟಕ್ಕೆ ಲಗ್ಗೆ ಇಟ್ಟಿದೆ. ಆನೆ ತಂತಿ ಬೇಲಿ ದಾಟುವ ದೃಶ್ಯ ಮೈ ಜುಮ್ ಎನ್ನಿಸುತ್ತದೆ. ಈ ವೇಳೆ ಇಬ್ಬರು ಕಾರ್ಮಿಕರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇಷ್ಟು ದಿನಗಳ ಕಾಲ ಮೂಡಿಗೆರೆ ತಾಲೂಕಿನ ಗೌಡಹಳ್ಳಿ, ಕೋಗಿಲೆ, ಸಾರಗೋಡು, ಪುರ, ಗೌತಳ್ಳಿ, ಹಳಸೆ, ದುಂಡುಗ, ಹಳೆ ಮೂಡಿಗೆರೆ, ಕೆಲ್ಲೂರು, ಕುನ್ನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಕಾಡಾನೆ ಹಾವಳಿ ಇತ್ತು. ಸ್ಥಳೀಯರು ಕಾಡಾನೆಯನ್ನು ಸ್ಥಳಾಂತರಿಸಿ ಎಂದು ಅರಣ್ಯ ಇಲಾಖೆಗೆ ಹತ್ತಾರು ಬಾರಿ ಮನವಿ ಮಾಡಿದ್ದರು. ಆದರೆ ಕೆಲವೊಮ್ಮೆ ತಡವಾಗಿಯಾದರೂ ಸ್ಥಳಕ್ಕೆ ಬರುತ್ತಿದ್ದ ಅಧಿಕಾರಿಗಳು ಪಟಾಕಿ ಸಿಡಿಸಿ ಸ್ಥಳಾಂತರಿಸುತ್ತೇವೆ ಎಂದು ಹೇಳಿ ಹೋಗುತ್ತಿದ್ದರು. ಮತ್ತೆ ಆನೆ ಕಂಡಾಗ ಮಾತ್ರ ಇತ್ತ ಸುಳಿಯುತ್ತಾರೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಾಡಾನೆ ದಾಳಿಯಿಂದ ಮೂಡಿಗೆರೆಯಲ್ಲಿ ಮೂರ್ನಾಲ್ಕು ಜನ ಸಾವನ್ನಪ್ಪಿದ್ದಾರೆ. ಇದೀಗ ಆನೆ ಮೂಡಿಗೆರೆ ಪಟ್ಟಣಕ್ಕೇ ಬಂದು ಬೀಡು ಬಿಟ್ಟಿರೋದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement
Advertisement