Connect with us

Chikkaballapur

ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

Published

on

ಚಿಕ್ಕಬಳ್ಳಾಪುರ: ಹೈನೋದ್ಯಮವೇ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರ. ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಮಾತ್ರ ಎಂದೂ ಬರ ಇಲ್ಲ. ಹಾಲಿನ ಹೊಳೆಯನ್ನೇ ಹರಿಸುವ ರೈತರಿಗೆ ಮಿಶ್ರ ತಳಿ ಸೀಮೆ ಹಸುಗಳೇ ಬದುಕಿನ ಆಧಾರಕ್ಕೆ ಆರ್ಥಿಕ ಮೂಲ. ಆದರೆ ಈಗ ಕ್ಷೀರಸಾಗರದ ಮೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಹೈನು ಗಾರಿಕೆಯ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

ಹೌದು. ಜಿಲ್ಲೆಯಾದ್ಯಂತ ಮಹಾಮಾರಿ ಕಾಲುಬಾಯಿ ಜ್ವರಕ್ಕೆ ನೂರಾರು ಜಾನುವಾರುಗಳ ಮರಣ ಮೃದಂಗ ಮುಂದುವರೆದಿದೆ. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಹಸು ಕಾಲುಬಾಯಿಜ್ವರಕ್ಕೆ ಬಲಿಯಾಗಿದೆ. ಅಲ್ಲದೇ ಉಳಿದ ಮೂರು ಹಸುಗಳು ಕೂಡ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ನರಳಾಡುತ್ತಿವೆ. ಅಂದ ಹಾಗೆ ಕಳೆದ 15 ದಿನಗಳಿಂದ ತಿಪ್ಪೇನಹಳ್ಳಿ ಗ್ರಾಮವೊಂದರಲ್ಲಿ 15ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿಜ್ವರಕ್ಕೆ ಬಲಿಯಾಗಿವೆ.

ಏನಿದು ಕಾಲುಬಾಯಿ ಜ್ವರ..?
ಇಂಗ್ಲಿಷ್ ನಲ್ಲಿ ಫೂಟ್ ಅಂಡ್ ಮೌತ್ ಡಿಸೀಸ್ ಎನ್ನವ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ವರ್ಗಕ್ಕೆ ಸೇರಿದೆ. ಗಾಳಿಯಿಂದ ಹರಡುವ ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ತುರುವುದ ಬಹುಕಷ್ಟದ ಕೆಲಸ. ನಿಯಂತ್ರಣಕ್ಕೆ ತರುವ ವೇಳೆಗೆ ಸಾಂಕ್ರಾಮಿಕ ರೋಗಕ್ಕೆ ನೂರಾರು ಹಸುಗಳು ಬಲಿಯಾಗಿರುತ್ತದೆ. ಗಾಳಿಯ ಮೂಲಕ ಅತಿ ವೇಗವಾಗಿ ಹರಡುವುದರಿಂದ ಅಕ್ಕ-ಪಕ್ಕದ ರಾಸುಗಳಿಗೆ ಬಹುಬೇಗ ಈ ಸೋಂಕು ತಗುಲುತ್ತದೆ.

ಸಾಮಾನ್ಯವಾಗಿ ಗೊರಸು ಇರುವಂತಹ ರಾಸುಗಳಿಗೆ ತಗುಲುವ ಈ ಸೋಂಕು, ಜಾನುವಾರುಗಳ ಕಾಲು, ಬಾಯಿ, ನಾಲಿಗೆ ಕೆಚ್ಚಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಗಳ ಮೇಲೆ ಗಾಯಗಳಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣಾಗಿ ಕನಿಷ್ಠ ಮೇವು ಕೂಡ ತಿನ್ನಲಾಗದಂತಹ ದುಸ್ಥಿತಿಗೆ ತಲುಪುವುತ್ತವೆ. ಅಲ್ಲದೇ ಗಾಯಗೊಂಡ ಜಾಗದಲ್ಲಿ ಹುಣ್ಣು ಹೆಚ್ಚಾಗಿ ನಿಶ್ಯಕ್ತಿಯಿಂದ ಬಾಯಿಯಲ್ಲಿ ಜೊಲ್ಲು ಸುರಿಸುತ್ತಾ ಕೊನೆಗೆ ಸಾವನ್ನಪ್ಪುತ್ತವೆ. ಕಳೆದ 2013-14 ರಲ್ಲೂ ಕೂಡ ಜಿಲ್ಲೆಯಲ್ಲಿ ನೂರಾರು ಹಸುಗಳು ಸಾವನ್ನಪ್ಪಿದ್ದವು. ಮಳಮಾಚನಹಳ್ಳಿ ಗ್ರಾಮವೊಂದರಲ್ಲೇ 45 ಹಸುಗಳು ಸಾವನ್ನಪ್ಪಿದ್ದವು.

ಚುನಾವಣಾ ಸೈಡ್ ಎಫೆಕ್ಟ್.!
ಈ ಬಾರಿ ಇದೆಕ್ಕೆಲ್ಲಾ ಪ್ರಮುಖ ಕಾರಣ, ಚುನಾವಣಾ ಸೈಡ್ ಎಫೆಕ್ಟ್. ಅಂದ ಹಾಗೆ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯ ಎಲ್ಲಾ ಜಾನುವಾರಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಆದರೆ ಈ ಬಾರಿ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿಜ್ವರ ವ್ಯಾಪಕವಾಗಿ ಹರಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರ ಸಾಕಷ್ಟು ಉಲ್ಭಣಗೊಂಡಿದ್ದು, ನೂರಾರು ರಾಸುಗಳು ಬಲಿಯಾಗಿವೆ. ಇನ್ನೂ ಗಾಳಿಯಲ್ಲಿ ಹರಡುವ ಈ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಇಲಾಖೆಯ ಅಧಿಕಾರಿಗಳು ಲಸಿಕೆ ಹಾಕಲು ಮುಂದಾಗಿಲ್ಲ.

ಸಂಕಷ್ಟದಲ್ಲಿ ರೈತ:
ಹೈನುಗಾರಿಕೆಯೇ ಜೀವನಾಧಾರ, ಹಸುಗಳಿಂದಲೇ ಉತ್ಪಾದನೆಯಾಗುವ ಹಾಲಿನಿಂದ ಬರುವ ಆದಾಯವೇ ಜಿಲ್ಲೆಯ ಬಹುತೇಕ ಕುಟುಂಬಗಳ ಸಂಸಾರದ ನೌಕೆಗೆ ಆರ್ಥಿಕ ಮೂಲ. ಒಂದು ಸೀಮೆಹಸುವಿಗೆ 60 ಸಾವಿರದಿಂದ ರೂ. ನಿಂದ 1 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುತ್ತಿರುವ ಈ ಕಾಲು ಬಾಯಿ ಜ್ವರದಿಂದ ಪ್ರತಿ ವರ್ಷವೂ ನೂರಾರು ಸೀಮೆ ಹಸುಗಳು ಬಲಿಯಾಗುತ್ತಿವೆ.

ಒಂದೆಡೆ ಪ್ರೀತಿಯಿಂದ ಸಾಕಿದ ಹಸು ಕಳೆದುಕೊಂಡ ದುಃಖ, ಮತ್ತೊಂದೆಡೆ ಕುಟುಂಬದ ಆರ್ಥಿಕ ಮೂಲವನ್ನೇ ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕ ನಷ್ಟದಿಂದ ಹಸುಗಳನ್ನ ಸಾಕುವ ಮನೆಯ ಮಹಿಳೆಯರ ಹಾಗೂ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಅಲ್ಲದೇ ಜ್ವರದಿಂದ ಸಾವನ್ನಪ್ಪಿದ ಹಸುವನ್ನು ಹಾಗೇ ಬಿಸಾಡುವ ಹಾಗಿಲ್ಲ, ಜೆಸಿಬಿ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ ಮಣ್ಣಲ್ಲಿ ಹೂತು ಹಾಕಬೇಕು. ಇಲ್ಲವಾದಲ್ಲಿ ಕಾಯಿಲೆ ಹರಡುವ ವೇಗ ಮತ್ತೆ ಹೆಚ್ಚಾಳವಾಗುತ್ತದೆ. ಸಂಕಷ್ಟದಲ್ಲಿರುವ ರೈತ ಜೆಸಿಬಿಗೆ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗುತ್ತದೆ. ಇನ್ನೂ ರೋಗ ಪೀಡಿತ ಹಸುವಿನ ಹಾಲನ್ನ ಸಹ ಹಾಲು ಉತ್ಪಾದಕರ ಸಂಘಗಳು ಖರೀದಿಸುವುದಿಲ್ಲ. ಇಷ್ಟೆಲ್ಲಾ ನೋವುನುಂಗಿಕೊಳ್ಳುವ ರೈತರು ಅಧಿಕಾರಿ ವರ್ಗ, ಸರ್ಕಾರಕ್ಕೆ ಹಿಡಿಶಾಪ ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.

ದೇವರ ಮೊರೆ.!
ಪ್ರತಿ ವರ್ಷವೂ ಬರುವ ಈ ಕಾಲು ಬಾಯಿ ಜ್ವರವನ್ನು ಹಳ್ಳಿಯ ಜನ ಗಾಳಿಯಮ್ಮ ಅಂತಲೇ ಕರೆಯುತ್ತಾರೆ. ದೇವರ ವಕ್ರದೃಷ್ಠಿ ನಮ್ಮ ಊರಿನ ಮೇಲೆ ಬಿದ್ದಿದೆ. ಹಾಗಾಗಿಯೇ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಜನರಲ್ಲಿದೆ. ಹೀಗಾಗಿ ಗಾಳಿಯಮ್ಮ ಬಂದಿದೆ ಅಂತ ಪ್ರತಿ ಗ್ರಾಮದಲ್ಲೂ ಈ ಕಾಯಿಲೆ ಕಾಣಿಸಿಕೊಂಡಾಗ ಗ್ರಾಮದೇವತೆಗಳ ಮೆರವಣಿಗೆ ಮಾಡಿ ಜಾನುವಾರುಗಳನ್ನ ಉಳಿಸಿಕೊಡುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ.

ಕಳಪೆ ಗುಣಮಟ್ಟದ ಲಸಿಕೆ ಕಾರಣ?
ಹೌದು, ಅಂದ ಹಾಗೇ ರಾಜ್ಯದಲ್ಲಿ ಈಗಾಗಲೇ ಕಳೆದ 7 ವರ್ಷಗಳಿಂದ ಅಂದರೆ ವರ್ಷಕ್ಕೆ ಎರಡು ಬಾರಿಯಂತೆ 14 ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಅತ್ಯುನ್ನತ ಗುಣಮಟ್ಟದ ಲಸಿಕೆಯನ್ನು ಸರ್ಕಾರ ಖರೀದ ಮಾಡಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಕಳೆದ 3 ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಲೂರು ಬಳಿಯ ಬಯೋವೆಟ್ ಎಂಬ ಖಾಸಗಿ ಸಂಸ್ಥೆಯ ಲಸಿಕೆಯನ್ನ ಖರೀದಿ ಮಾಡಿ ಹಾಕಲಾಗುತ್ತಿದೆ. ಆದರೆ ಈ ಬಯೋವೆಟ್ ಲಸಿಕೆಯನ್ನು ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಿರಸ್ಕರಸಿ, ಸಂಸ್ಥೆಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇಂತಹ ಸಂಸ್ಥೆಯ ಕಳಪೆ ಗುಣಮಟ್ಟದ ಲಸಿಕೆ ಹಾಕುತ್ತಿರುವುದರಿಂದ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಸಾಧ್ಯವಾಗದಿರುವುದು ಕಾರಣ ಎಂಬುದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ರ ಆರೋಪವಾಗಿದೆ.

ರೋಗ ನಿಯಂತ್ರಣ ಕ್ರಮಗಳು: ಸಮಯಕ್ಕೆ ತಕ್ಕಂತೆ ಕಾಲು ಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕಿಸುವುದು. ರೋಗ ಪೀಡಿತ ಹಸುಗಳಿಂದ ರೋಗ ಮುಕ್ತ ಹಸುಗಳನ್ನ ದೂರ ಇಡುವುದು. ರೋಗ ಹರಡದಂತೆ ಸತ್ತ ಹಸುಗಳನ್ನ ಮಣ್ಣಲ್ಲಿ ಹೂತು ಹಾಕುವುದು ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿಯಂತ್ರಣಕ್ಕೆ ತರಬಹುದು.

– ಮುದ್ದುಕೃಷ್ಣ