Monday, 15th July 2019

ಕಂತೆ ಕಂತೆ ನೋಟು ಪತ್ತೆ – ವೆಲ್ಲೂರು ಲೋಕಸಭಾ ಚುನಾವಣೆ ರದ್ದು?

ಚೆನ್ನೈ: ಡಿಎಂಕೆ ಮುಖಂಡರ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾಗಿದೆ. ಈ ಮೂಲಕ ಹಣದಿಂದ ಮತದಾರರನ್ನು ಓಲೈಸುವ ಪ್ರಯತ್ನ ನಡೆಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಚುನಾವಣಾ ಆಯೋಗವು ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ರದ್ದು ಮಾಡಲು ಅನುಮತಿ ಕೋರಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ. ರಾಷ್ಟ್ರಪತಿಗಳು ಪತ್ರಕ್ಕೆ ಸಹಿ ಹಾಕಿದರೆ ಚುನಾವಣೆ ರದ್ದಾಗಲಿದೆ.

ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರಂದು ನಡೆಯಲಿದೆ. ಅಷ್ಟೇ ಅಲ್ಲದೆ ವೆಲ್ಲೂರು ವ್ಯಾಪ್ತಿಯ ಅಂಬೂರ್ ಹಾಗೂ ಗುಡಿಯಾಟ್ಯಾಮ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಕೂಡ ನಡೆಯಲಿದೆ. ಆದರೆ ಈ ಎರಡೂ ಕ್ಷೇತ್ರಗಳ ಚುನಾವಣೆ ರದ್ದು ಮಾಡಲಾಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

ಡಿಎಂಕೆ ನಾಯಕ ದೊರೈ ಮುರುಗನ್ ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿಯ ಮಾಡಿತ್ತು. ಈ ವೇಳೆ ಅವರ ಗೋದಾಮಿನಲ್ಲಿ ಬರೋಬ್ಬರಿ 11.53 ಕೋಟಿ ರೂ. ಹಣ ಪತ್ತೆಯಾಗಿತ್ತು. ಹೀಗಾಗಿ ಈ ಹಣವು ದೊರೈ ಮುರುಗನ್ ಅವರಿಗೆ ಸೇರಿದ್ದು ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿದ್ದವು.

ಐಟಿ ದಾಳಿಯನ್ನು ಖಂಡಿಸಿದ್ದ ಡಿಎಂಕೆ ನಾಯಕರು, ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಆರೋಪಿಸಿದ್ದರು. ಇತ್ತ ದೊರೈ ಮುರುಗನ್ ಅವರು ಐಟಿ ರೇಡ್‍ನಿಂದ ಚುನಾವಣೆ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *