Saturday, 25th May 2019

Recent News

ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 9 ಬಾಲಕರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಜೀವವನ್ನು ಲೆಕ್ಕಿಸಿದೆ ವಿವಿಧ ದೇಶಗಳ ಡೈವರ್ (ಮುಳುಗು ತಜ್ಞರು) ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಕಿರು ವಿವರವನ್ನು ನೀಡಲಾಗಿದೆ.

ಎಲ್ಲಿದೇ ಥಮ್‍ಲುವಾಂಗ್ ಗುಹೆ?
ಥೈಲ್ಯಾಂಡ್ ದೇಶದ ಉತ್ತರ ಭಾಗದಲ್ಲಿ ಚಿಯಾಂಗ್ ರೈ ಪ್ರಾಂತ್ಯದ ಕುನ್ ನಮ್ ನಂಗ್ ಅರಣ್ಯದಲ್ಲಿ ಥಮ್ ಲುವಾಂಗ್ ನಂಗ್ ನಾನ್ ಬೆಟ್ಟವಿದೆ. ಮಯನ್ಮಾರ್ ದೇಶದ ಗಡಿ ಭಾಗದಲ್ಲಿರುವ ಈ ಗುಹೆಯಲ್ಲಿ ಬುದ್ಧನ ದೇವಾಲಯವಿದೆ. ಹೀಗಾಗಿ ಇಲ್ಲಿಗೆ ವೈಲ್ಡ್ ಬೊವಾರ್ ಫುಟ್‍ಬಾಲ್ ತಂಡದ 12 ಬಾಲಕರು ಹಾಗೂ ಕೋಚ್ ಜೂನ್ 23ರಂದು ಹೋಗಿದ್ದರು.

ಮಳೆಯೇ ಕಾರಣ ಹೇಗೆ?
6 ರಿಂದ 12 ವರ್ಷದ ಒಳಗಿನ ಬಾಲಕರು 25 ವರ್ಷದ ಕೋಚ್ ಜೊತೆ ಗುಹೆಯಲ್ಲಿ 4 ಕಿ.ಮೀ ಕ್ರಮಿಸಿದ್ದಾರೆ. ಈ ವೇಳೆ ಮಳೆ ಆರಂಭಗೊಂಡು ಗುಹೆ ಕೆಲವು ಭಾಗದಲ್ಲಿ ನೀರಿನಿಂದ ಆವೃತವಾಗಿದೆ. ಹೀಗಾಗಿ ಅವರಿಗೆ ಇದ್ದ ರಸ್ತೆಗಳು ಮುಚ್ಚಿ ಹೋಗಿವೆ. ಈ ವೇಳೆ ನೆರೆಯಿಂದ ಪಾರಾಗಲು ಅನಿವಾರ್ಯ ಎಂಬಂತೆ ಅವರು ಮಣ್ಣಿನ ಗುಡ್ಡದಂತಹ ಜಾಗದಲ್ಲಿ ಆಶ್ರಯ ಪಡೆದಿದ್ದರು.

ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿದ್ದು ಯಾಕೆ?
ಥೈಲ್ಯಾಂಡ್‍ನಲ್ಲಿ ಈಗ ಮಳೆಗಾಲವಾಗಿದ್ದು, ಭಾರೀ ಮಳೆ ಸುರಿಯುತ್ತಿದೆ. ಇನ್ನೂ ಒಂದು ವಾರ ಕಾಲ ಮಳೆ ಬೀಳಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ದೊಡ್ಡ ದೊಡ್ಡ ಪಂಪ್‍ಗಳನ್ನು ಇಟ್ಟು ನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಮಕ್ಕಳ ಹೊರತರಲು 2 ವಾರಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ವಿಶ್ವದ ಅನೇಕ ರಾಷ್ಟ್ರಗಳು ನೆರವಿಗೆ ಧಾವಿಸಿದೆ. ಮಕ್ಕಳು ಇರುವ ಜಾಗಕ್ಕೆ ಹೋಗಿ ಬರಲು 5 ಗಂಟೆ ಬೇಕಾಗುತ್ತದೆ. ಗುಹೆಯ ಒಳಗಡೆ ಆಮ್ಲಜನಕ ಸಮಸ್ಯೆ ಇದೆ. ಆಮ್ಲಜನ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಹೋಗಲಾಗುತ್ತದೆ. ಮಕ್ಕಳು ಸಿಲುಕಿರುವ ಜಾಗದ ಭೂ ಮೇಲ್ಭಾಗದಿಂದ ಡ್ರಿಲ್ಲಿಂಗ್ ಮಾಡಿ ಮಕ್ಕಳನ್ನು ಹೊರ ತೆಗೆಯುವ ನಿಟ್ಟಿನಲ್ಲೂ ಕಾರ್ಯಾಚರಣೆ ನಡೆದಿದೆ.

ಸ್ಪೇಸ್ ಎಕ್ಸ್ ನೆರವು:
ಸ್ಪೇಸ್ ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಕೂಡ ತಮ್ಮ ಬೋರಿಂಗ್ ಕಂಪೆನಿಯ ತಜ್ಞರನ್ನು ಕಾರ್ಯಾಚರಣೆಯ ಸ್ಥಳಕ್ಕೆ ಕಳುಹಿಸಿ ಕೊಟ್ಟಿದ್ದು, ಹೊಸದಾಗಿ ಪುಟಾನಿ ಸಬ್‍ಮರೀನ್ ಕಳುಹಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಮಕ್ಕಳ ರಕ್ಷಣೆಗೆ ಸಹಾಯ ನೀಡಲು ವಿಶ್ವದ ಪ್ರಮುಖ ದೇಶಗಳಾದ ಅಮೆರಿಕ, ಬ್ರಿಟನ್, ಯುರೋಪಿನ್ ಕೇವ್ ರಿಸ್ಕ್ ಸಂಘಟನೆಯೂ ಕೈ ಜೋಡಿಸಿದೆ.

ಅಲ್ಲಿಂದ ಮಕ್ಕಳು ಪತ್ರ ಕಳುಹಿಸಿದರು:
ಮಕ್ಕಳು ಇರುವ ಜಾಗಕ್ಕೆ ಹೋಗಿದ್ದ ಡ್ರೈವರ್ ಗಳು ಮಕ್ಕಳಿಂದ ಪತ್ರ ತಂದಿದ್ದಾರೆ. ನಾವು ಕ್ಷೇಮವಾಗಿದ್ದೇವೆ ಎಂದು ಮಕ್ಕಳು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಾಲಕ ಮನೆಗೆ ಬಂದ ಕೂಡಲೇ ತನಗೆ ಬಿಕನ್ ಫ್ರೈಡ್ ರೈಸ್ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.

ಕಾಪಾಡಲು ಹೋದವನೇ ಸಾವು:
ಮಕ್ಕಳ ರಕ್ಷಣೆಗಾಗಿ ಹೋಗಿದ್ದ ಸೀಲ್ ಮಾಜಿ ಡೈವರ್ (ಮುಳುಗು ತಜ್ಞ) ಒಬ್ಬರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ನುರಿತ ಡೈವರ್ ಆಗಿದ್ದ ಸಮನ್ ಅಪಾಯವನ್ನೂ ಲೆಕ್ಕಿಸದೇ ಒಳಕ್ಕೆ ಇಳಿದಿದ್ದರು. ಆದರೆ ಹಿಂದಿರುಗುವ ವೇಲೆ ಏರ್ ಬ್ಯಾಗ್ ಖಾಲಿಯಾಗಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದರು. ಬ್ರಿಟಿಷ್ ಡೈವರ್ ಮೊದಲು ಮಕ್ಕಳು ಇರುವ ಸ್ಥಳವನ್ನು ಪತ್ತೆ ಮಾಡಿದ್ದು, ಅಷ್ಟೇ ಅಲ್ಲದೇ ವಿಶ್ವದ ಪ್ರಮುಖ ಡೈವರ್‍ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಥೈಲ್ಯಾಂಡ್ ದೇಶದ ಸೇನೆಯಲ್ಲಿ ಸೀಲ್ ತಂಡವೊಂದಿದೆ. ಈ ತಂಡದ 110ಕ್ಕೂ ಹೆಚ್ಚು ಡೈವರ್ ಗಳು ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಮಕ್ಕಳ ಸ್ಥಿತಿ ಹೇಗಿದೆ?
ಗುಹೆಯಲ್ಲಿ ಸಿಲುಕಿರುವ ಮಕ್ಕಳಿಗೆ ಆಹಾರ, ಔಷಧಿ, ಬೆಡ್‍ಶೀಟ್ ಇನ್ನಿತರ ಸವಲತ್ತುಗಳನ್ನು ಡೈವರ್ ಗಳು ತಲುಪಿಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಬಹುದು. ಆದರೆ ಆಮ್ಲಜನಕದ ಪ್ರಮಾಣ ಇಳಿಕೆ ಆಗುತ್ತಿರುವುದು ಮಕ್ಕಳ ಜೀವ ರಕ್ಷಣೆಗೆ ಬಹು ದೊಡ್ಡ ಸವಾಲು. ಮಕ್ಕಳು ಹಾಗೂ ಕೋಚ್ ಇರುವ ಸ್ಥಳಕ್ಕೆ ಆಮ್ಲಜನಕವನ್ನು ದೊಡ್ಡ ಪ್ರಮಾಣದಲ್ಲಿ ಪಂಪ್ ಮಾಡಲಾಗುತ್ತಿದೆ.

ಗುಹೆ ಹೊರಗೆ ಜಾತ್ರೆ
ಬಾಲಕರು ಸಿಲುಕಿರುವ ಥಮ್ ಲುವಾಂಗ್ ಗುಹೆ ಹೊರ ಭಾಗದಲ್ಲಿ ಮಕ್ಕಳ ಪೋಷಕರು, ಸಂಬಂಧಿಕರು, ಬೀಡುಬಿಟ್ಟಿದ್ದಾರೆ. ರಕ್ಷಣೆಯ ಕಾರ್ಯ ವೀಕ್ಷಿಸಲು ವಿದೇಶದಿಂದಲೂ ಜನರು ಧಾವಿಸುತ್ತಿದ್ದಾರೆ. ಬೌದ್ಧ ಸನ್ಯಾಸಿಗಳು ಕೂಡ ಗುಹೆಯ ಹೊರಭಾಗದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಊಟ, ತಿಂಡಿಗೆ ವ್ಯವಸ್ಥೆಯಾಗುತ್ತಿದೆ.

Leave a Reply

Your email address will not be published. Required fields are marked *