Wednesday, 19th February 2020

Recent News

ಏನ್ ವ್ಯಾಖ್ಯಾನ ಮಾಡ್ತಿರೋ ಮಾಡಿ, ನಾಳೆ ಸಿಗೋಣ: ಮಾಧ್ಯಮಗಳ ವಿರುದ್ಧ ಡಿಕೆಶಿ ಕಿಡಿ

– ನೀನ್ ಏನ್ ನನ್ನ ವಕೀಲ ಏನಪ್ಪ?

ಬೆಂಗಳೂರು: ಎಲ್ಲರೂ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಿದ್ದೀರಾ. ಏನ್ ವ್ಯಾಖ್ಯಾನ ಮಾಡ್ತಿರೋ ಮಾಡಿ. ನಾಳೆ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಹೈಕೋರ್ಟ್ ನಲ್ಲಿ ಅರ್ಜಿ ರದ್ದಾದ ಬಳಿಕ ಸದಾಶಿವನಗರದ ಅವರ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಶುಕ್ರವಾರ ಮಾಧ್ಯಮಗೋಷ್ಠಿ ಕರೆದು ಮಾತನಾಡುತ್ತೇನೆ ಎಂದರು. ಈ ವೇಳೆ ವಕೀಲರನ್ನು ಭೇಟಿ ಮಾಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಗುಡುಗಿದ ಅವರು, ನೀನು ಏನ್ ನನ್ನ ವಕೀಲ ಏನಪ್ಪ? ನಾಳೆ ಮಾತನಾಡುತ್ತೇನೆ ಬಿಡಿ ಎಂದು ಹೇಳಿದರು.

ಬಳಿಕ ಡಿ.ಕೆ.ಶಿವಕುಮಾರ್ ಅವರು ಮನೆಗೆ ಬಂದ ನಾಲ್ವರು ಇಡಿ ಅಧಿಕಾರಿಗಳು ಮಾಜಿ ಸಚಿವರಿಗೆ ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ಸಮನ್ಸ್ ನೀಡಿದ ಕೆಲವೇ ನಿಮಿಷದಲ್ಲಿ ಮನೆಯಿಂದ ಫೈಲ್ ಹಿಡಿದು ಪತ್ನಿ ಹಾಗೂ ಮಗಳ ಜೊತೆಗೆ ಹೊರ ಬಂದಿದ್ದಾರೆ. ಈ ವೇಳೆಯೂ ಮಾಧ್ಯಮಗಳ ವಿರುದ್ಧ ಗುಡುಗಿದ ಮಾಜಿ ಸಚಿವರು, ದೆಹಲಿಗೆ ಬೇಕಾದರೂ ಹೋಗುತ್ತೇನೆ, ಎಲ್ಲಿಗೆ ಬೇಕಾದರೂ ವಿಚಾರಣೆಗೆ ಹೋಗುತ್ತೇನೆ. ಶುಕ್ರವಾರ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದು ಮನೆಯಿಂದ ಹೊರಟು ಹೋದರು.

ಡಿ.ಕೆ.ಶಿವಕುಮಾರ್ ಅವರು ಪತ್ನಿ ಮತ್ತು ಮಗಳ ಜೊತೆಗೆ ಸದಾಶಿವನಗರ ಮನೆಯಿಂದ ನೇರವಾಗಿ ರ‍್ಯಾಡಿಸನ್‌ ಬ್ಲೂ ಹೋಟೆಲ್‍ಗೆ ಆಗಮಿಸಿದ್ದಾರೆ. ಅಲ್ಲಿಯೇ ಇಂದು ಇದ್ದು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *