Bengaluru City
ಪತ್ತೆಯಾಗದ ಡಿವೈಎಸ್ಪಿ ಲಕ್ಷ್ಮಿ ಮೊಬೈಲ್

ಬೆಂಗಳೂರು: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಡಿವೈಎಸ್ಪಿ ಲಕ್ಷ್ಮಿ ಅವರ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಸಿಗದ ಹಿನ್ನೆಲೆ ಪೊಲೀಸರಿಗೆ ತಾಂತ್ರಿಕ ಹಿನ್ನಡೆ ಆಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಮೊಬೈಲ್ ಪತ್ತೆಯಾದ್ರೆ ತನಿಖೆಗೆ ಮಹತ್ವದ ಸುಳಿವು ಸಿಗುವ ಸಾಧ್ಯತೆಗಳಿವೆ.
ಡಿವೈಎಸ್ಪಿ ಲಕ್ಷ್ಮಿ ಅವರ ಒಳ ಮತ್ತು ಹೊರ ಹೋಗಿರುವ ಫೋನ್ ಕರೆಗಳು, ವಾಟ್ಸಪ್ ಚಾಟಿಂಗ್ ಸೇರಿ ಹಲವು ಮಾಹಿತಿ ಸಿಗಲಿದೆ. ಸಾವಿಗೂ ಮುನ್ನ ಯಾರ ಜೊತೆ ಎಷ್ಟು ಸಮಯ ಮಾತನಾಡಿದ್ದಾರೆ. ಯಾವ ಸಮಯದಲ್ಲಿ ಎಲ್ಲಿದ್ದರು ಎಬಿತ್ಯಾದಿ ವಿಷಯಗಳು ತಿಳಿಯಲಿವೆ.
ಡಿಸೆಂಬರ್ 16ರಂದು ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಬಿಬಿಎಂಪಿ ಗುತ್ತಿಗೆದಾರ ಮನೋಹರ್ ಮನೆಯಲ್ಲಿ ರಾತ್ರಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಮನೋಹರ್ ಮನೆಯಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡವರು ಇದು ಆತ್ಮಹತ್ಯೆ ಎನ್ನುತ್ತಿದ್ರೆ, ಕುಟುಂಬಸ್ಥರು ಮಾತ್ರ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಲಕ್ಷ್ಮಿ ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ನಾಲ್ವರನ್ನು ತನಿಖೆ ನಡೆಸ್ತಿದ್ದಾರೆ
2014ರ ಕೆಎಸ್ಪಿಎಸ್ ಬ್ಯಾಚ್ನಲ್ಲಿ ಆಯ್ಕೆಯಾಗಿದ್ದ 25 ಅಧಿಕಾರಿಗಳ ಪೈಕಿ 21 ಮಂದಿಗೆ ಎಕ್ಸಿಕ್ಯೂಟೀವ್ ಪೋಸ್ಟಿಂಗ್ ಸಿಕ್ಕಿತ್ತು. ಆದರೆ ಲಕ್ಷ್ಮಿ ಸೇರಿ ನಾಲ್ವರಿಗೆ ನಾನ್ ಎಕ್ಸಿಕ್ಯೂಟೀವ್ ಪೋಸ್ಟಿಂಗ್ ಸಿಕ್ಕಿತ್ತು. ಇದು ಲಕ್ಷ್ಮಿ ಅವರಿಗೆ ಮುಜುಗರ ಉಂಟು ಮಾಡಿತ್ತು ಎನ್ನಲಾಗಿದೆ. ಹೀಗಾಗಿ ಸರಿಯಾಗಿ ಕೆಲಸ ಮಾಡದೇ ದೀರ್ಘ ರಜೆ ಮೇಲೆ ಇರುತ್ತಿದ್ದರು. ಆದರೆ ಇತ್ತೀಚಿಗೆ ಕೆಲಸಕ್ಕೆ ವಾಪಸ್ ಆಗಿದ್ದರು.
