Connect with us

Districts

ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ – ಕಾವೇರಿ ಜಾತ್ರೆಯ ಮೇಲೆ ಪ್ರಾಕೃತಿಕ ವಿಕೋಪದ ಛಾಯೆ

Published

on

ಮಡಿಕೇರಿ: ಪ್ರಮುಖ ಯಾತ್ರಾಸ್ಥಳ, ಪವಿತ್ರ ಕ್ಷೇತ್ರ ಕೊಡಗಿನ ತಲಕಾವೇರಿಯ ಕಾವೇರಿ ಜಾತ್ರೆಗೂ ಪ್ರಾಕೃತಿಕ ವಿಕೋಪದ ಕರಾಳ ಛಾಯೆ ಆವರಿಸಿದೆ. ಹೊರ ಭಾಗದ ಯಾತ್ರಿಗಳಿಂದ ತುಂಬಿರಬೇಕಾಗಿದ್ದ ಕ್ಷೇತ್ರ ಈ ಬಾರಿ ಜಿಲ್ಲೆಯ ಯಾತ್ರಿಗಳಿಗೆ ಮಾತ್ರ ಸೀಮಿತವಾಗಿದೆ.

ತುಲಾಮಾಸದಲ್ಲಿ ಕಾವೇರಿ ದರ್ಶನ ಮಾಡಿ ಪವಿತ್ರ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎನ್ನುವುದು ಕೋಟ್ಯಂತರ ಕಾವೇರಿ ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ತುಲಾಮಾಸದಲ್ಲಿ ತಲಕಾವೇರಿ ಭಾಗಮಂಡಲ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಕಾವೇರಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಪ್ರತೀ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಿದ್ದರು. ಆದರೆ ಈ ವರ್ಷದ ತುಲಾಮಾಸದ ಕಾವೇರಿ ಜಾತ್ರೆಯ ಮೇಲೆ ಪ್ರಾಕೃತಿಕ ವಿಕೋಪ ಹೊಡೆತ ನೀಡಿದ್ದು, ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಈ ಹಿಂದೆ ಜಾತ್ರಾ ಸಮಯದಲ್ಲಿ ಪ್ರತಿದಿನ 50 ರಿಂದ 60 ಸಾವಿರಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈಗ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 10 ಸಾವಿರವನ್ನೂ ದಾಟುತ್ತಿಲ್ಲ. ತೀರ್ಥೋದ್ಭವದ ದಿನ ಕೂಡಾ ಇದಕ್ಕೆ ಸಾಕ್ಷಿಯಾಗಿದ್ದು, ಹೆಚ್ಚಿನ ಭಕ್ತರು ಭೇಟಿ ನೀಡಿರಲಿಲ್ಲ. ಈಗಲೂ ಅದು ಮುಂದುವರಿದಿದ್ದು, ಭಕ್ತರ ಸಂಖ್ಯೆ ಇಳಿಮುಖವಾಗಿರುವುದರಿಂದ ಕ್ಷೇತ್ರ ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ ಎಂದು ದೇವಾಲಯದ ಮುಖ್ಯಸ್ಥರಾದ ಮೋಟ್ಟಯ್ಯ ಅವರು ತಿಳಿಸಿದ್ದಾರೆ.

ಎರಡೂವರೆ ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿನ್ನೆಲೆ ಹೊರಭಾಗದ ಭಕ್ತರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಎಫೆಕ್ಟ್ ಎಂಬಂತೆ ಯಾತ್ರಾಸ್ಥಳ ತಲಕಾವೇರಿ ಭಾಗಮಂಡಲದಲ್ಲಿ ಭಕ್ತರ ಸಂಖ್ಯೆ ಕುಸಿದಿದೆ. ಕೊಡಗಿನ ಭಕ್ತರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದದನ್ನ ಹೊರತುಪಡಿಸಿದರೆ ಇನ್ಯಾವ ಕಡೆಯಿಂದಲೂ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಬರುತ್ತಿಲ್ಲ. ಕೇಶಮುಂಡನ ಹಾಗೂ ಪಿಂಡ ಪ್ರಧಾನ ಮೊದಲಾದ ಕಾರ್ಯಗಳಿಗೂ ಹೆಚ್ಚಿನವರು ಬರುತ್ತಿಲ್ಲ.

ಭಕ್ತರ ಸಂಖ್ಯೆ ಕುಸಿದಿದ್ದು ಇದರ ನೇರ ಪರಿಣಾಮ ವರ್ತಕರ ಮೇಲೆ ತಟ್ಟಿದ್ದು, ಗ್ರಾಹಕರಿಲ್ಲದೆ ಅಂಗಡಿ ಮಳಿಗೆಗಳು ಬಿಕೋ ಎನ್ನುತ್ತಿವೆ. ಕೆಲವರಂತೂ ಅಂಗಡಿಗೆ ಬೀಗ ಹಾಕಿ ಹೋಗಿದ್ದಾರೆ. ಪ್ರಾಕೃತಿಕ ವಿಕೋಪ ತಲಕಾವೇರಿ, ಭಾಗಮಂಡಲದಲ್ಲಿ ಸಂಭವಿಸದೇ ಇದ್ದರೂ ಅದರ ಪರಿಣಾಮವನ್ನು ಎದುರಿಸಬೇಕಾದ ಅನಿವಾರ್ಯ ಕ್ಷೇತ್ರಕ್ಕೆ ಬಂದಿರುವುದು ಸತ್ಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv