Connect with us

Bengaluru City

ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

Published

on

– ಹ್ಯಾಕ್ ಮಾಡಿ ಎದುರಾಳಿ ಆಟಗಾರರ ಕಾರ್ಡ್ ತಿಳಿಯುತ್ತಿದ್ದ
– ಬೇಕಾದ ವ್ಯಕ್ತಿಗಳಿಗೆ ಸರ್ಕಾರಿ ಟೆಂಡರ್
– ಚೀನಾ ಪೋಕರ್ ವೆಬ್‍ಸೈಟ್ ಮೇಲೆ ಕಣ್ಣು
– ಸಿಸಿಬಿ ಪೊಲೀಸರಿಂದ ಶ್ರೀಕೃಷ್ಣ ಅರೆಸ್ಟ್

ಬೆಂಗಳೂರು: ಸರ್ಕಾರದ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಹಣ ಮಾಡುತ್ತಿದ್ದ ಕುಖ್ಯಾತ ಹ್ಯಾಕರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(25) ಬಂಧಿತ ಆರೋಪಿ. ಮಂಗಳವಾರ ಈತನನ್ನು ಬಂಧಿಸಿದ್ದು ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ ಪಂತ್‌ ಈತನ ಬಗ್ಗೆ ವಿವರಣೆ ನೀಡಿದ್ದಾರೆ.

ಶ್ರೀಕೃಷ್ಣ ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ.

ಹಣ ಹೇಗೆ?
ಹ್ಯಾಕಿಂಗ್‍ನಲ್ಲಿ ಎಷ್ಟು ತಜ್ಞ ಆಗಿದ್ದ ಪೋಕರ್ ಗೇಮ್ ವೇಳೆ ಉಳಿದ ಆಟಗಾರರ ಬಳಿ ಯಾವ ಕಾರ್ಡ್ ಇದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುತ್ತಿದ್ದ. ಈ ಮೂಲಕ ತನಗೆ ಬೇಕಾದಂತೆ ಕಾರ್ಡ್ ಹಾಕಿ ಆಟವನ್ನು ಆಡಿ ದುಡ್ಡು ಮಾಡುತ್ತಿದ್ದ. ಈ ಸಂಬಂಧ 2018ರಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯನ್ನು ಅನಾಮಿಕ ವ್ಯಕ್ತಿಗಳ ವಿರುದ್ಧ ಪೋಕರ್‌ ಕಂಪನಿಯೊಂದು ದೂರು ನೀಡಿ ಪ್ರಕರಣ ದಾಖಲಾಗಿತ್ತು. ಇಷ್ಟೇ ಅಲ್ಲದೇ ಆನ್‍ಲೈನ್ ಗೇಮಿಂಗ್ ಆಪ್‍ಗಳನ್ನೇ ಹ್ಯಾಕ್ ಮಾಡಿ ಕೊನೆಗೆ ಡೆವಲಪರ್‌ಗಳ ಜೊತೆ ಸಂವಹನ ನಡೆಸಿ ಬೇಕಾದಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ. ಸದ್ಯದ ಪ್ರಾಥಮಿಕ ತನಿಖೆಯ ವೇಳೆ ಹ್ಯಾಕ್ ಮಾಡಿ 350 ಕೋಟಿ ರೂ. ಹಣವನ್ನು ಶ್ರೀಕೃಷ್ಣ ಪಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪ್ಲಾಸ್ಟಿಕ್ ಕುರ್ಚಿ ಒಡೆದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಸಹೋದರರು

ಟೆಂಡರ್ ಹ್ಯಾಕ್ ಹೇಗೆ?
ಸರ್ಕಾರಗಳು ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಆನ್‍ಲೈನ್‍ನಲ್ಲಿ ಟೆಂಡರ್ ಕರೆಯುವ ವ್ಯವಸ್ಥೆ ಮಾಡಿಕೊಂಡಿವೆ. ಈತ ಈ ಟೆಂಡರ್ ನಡೆಯುವ ವೆಬ್‍ಸೈಟ್‍ಗಳನ್ನೇ ಹ್ಯಾಕ್ ಮಾಡುತ್ತಿದ್ದ. ಟೆಂಡರ್ ವೇಳೆ ಬೇಕಾದ ವ್ಯಕ್ತಿಗಳಿಗೆ ಟೆಂಡರ್ ಸಿಗುವಂತೆ ಮಾಡುತ್ತಿದ್ದ. ಹೀಗಾಗಿ ಬಹಳಷ್ಟು ದೊಡ್ಡ ವ್ಯಕ್ತಿಗಳ ಈತನ ಹಿಂದೆ ಇರುವ ಅನುಮಾನ ವ್ಯಕ್ತವಾಗಿದೆ.

ಬಿಟ್‍ಕಾಯಿನ್ ಬಳಕೆ:
ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ.

 

ಪತ್ತೆಯಾಗಿದ್ದು ಹೇಗೆ?
ಹೆಚ್ಚು ಸುದ್ದಿಯಾಗುತ್ತಿರುವ ಡ್ರಗ್ಸ್ ಪ್ರಕರಣವನ್ನು ಸಿಸಿಬಿ ಮತ್ತು ಎನ್‍ಸಿಬಿ ತನಿಖೆ ನಡೆಸುತ್ತಿದೆ. ಈ ತನಿಖೆಯಿಂದಾಗಿ ಕಳೆದ ವಾರ ಸಿಸಿಬಿ ಪೊಲೀಸರು ಸದಾಶಿವ ನಗರದಿಂದ ಸಂಜಯ್, ಸುನೀಶ್ ಹೆಗ್ಡೆ, ಹೇಮಂತ್ ಅವರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆಯ ಸಮಯದಲ್ಲಿ ಶ್ರೀಕೃಷ್ಣನನ್ನು ಬಳಸಿಕೊಂಡು ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ತರಿಸುತ್ತಿದ್ದ ವಿವರವನ್ನು ತಿಳಿಸಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಈಗ ಬಂಧನವಾಗಿದೆ.

ಜಾಮೀನು ತರುತ್ತಿದ್ದ:
ಈತನ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಬಂಧನ ಮಾಡದ ಕಾರಣ ಈತ ಈ ಕೃತ್ಯ ಎಸಗಿದ್ದು ಇದಕ್ಕೆ ಪೊಲೀಸರ ಲೋಪವೇ ಕಾರಣ ಎಂಬ ಪ್ರಶ್ನೆಗೆ ಕಮಲ್ ಪಂತ್, ಬಂಧನಕ್ಕೂ ಮೊದಲೇ ಶ್ರೀಕೃಷ್ಣ ನ್ಯಾಯಾಲಯದಿಂದ ಜಾಮೀನು ತರುತ್ತಿದ್ದ. ಹೀಗಾಗಿ ಈತನ ಬಂಧನ ಸಾಧ್ಯವಾಗುತ್ತಿರಲಿಲ್ಲ. ಸದ್ಯಕ್ಕೆ ಈತನ ಮೇಲೆ ಮೂರು ಪ್ರಕರಣಗಳಿವೆ. ಮುಂದೆ ತನಿಖೆ ಮಾಡುತ್ತೇವೆ. ಈತ ಅತಿ ದೊಡ್ಡ ಹ್ಯಾಕರ್ ಎಂಬ ಕಾರಣಕ್ಕೆ ನಾನು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದ್ದೇನೆ. ಇಲ್ಲದಿದ್ದರೆ ಈತನ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಅಗತ್ಯವೇ ಇರಲಿಲ್ಲ. ಈಗ ಈತನನ್ನು ಬಂಧಿಸಿದ್ದಕ್ಕೆ ಸಿಸಿಬಿ ಪೊಲೀಸರನ್ನು ಅಭಿನಂದಿಸಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ. ಎಲ್ಲವನ್ನು ಸಮಗ್ರವಾಗಿ ತನಿಖೆ ನಡೆಸುತ್ತೇವೆ ಎಂದು ಉತ್ತರಿಸಿದರು.

ಚೀನಾ ಸೈಟ್ ಮೇಲೆ ಕಣ್ಣು:
ಪೋಕರ್ ಅಪ್ಲಿಕೇಶನ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಶ್ರೀಕೃಷ್ಣ ಚೀನಾದ ಗುಡ್ ಗೇಮ್ ಪೋಕರ್ ವೆಬ್‍ಸೈಟ್ ಹ್ಯಾಕ್ ಮಾಡಲು ಪ್ರಯತ್ನ ನಡೆಸುತ್ತಿದ್ದ. ಕಳೆದ ಜುಲೈ ತಿಂಗಳಿನಿಂದ ಈತ ನಿರಂತರ ಪ್ರಯತ್ನ ನಡೆಸುತ್ತಿದ್ದ. ಈತನ ಎಲ್ಲ ಖರ್ಚುಗಳನ್ನು ಬೇರೆಯವರು ನೋಡಿಕೊಳ್ಳುತ್ತಿದ್ದರು. ಚಿಕ್ಕಮಗಳೂರು, ಕಬಿನಿ, ಗೋವಾಗಳಿಗೆ ಈತ ತೆರಳಿದ್ದ. ಹೋದ ಕಡೆ ಎಲ್ಲ ಹ್ಯಾಕಿಂಗ್ ಮಾಡುತ್ತಿದ್ದ. ಒಂದು ವೇಳೆ ಈತ ಚೀನಾದ ವೆಬ್‍ಸೈಟ್ ಹ್ಯಾಕ್ ಮಾಡಿದ್ದರೆ ಭಾರೀ ಹಣವನ್ನು ಗಳಿಸುವ ಸಾಧ್ಯತೆ ಇತ್ತು.

ಪ್ರಭಾವಿಗಳ ನಂಟು:
ಯುಬಿ ಸಿಟಿಯಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಆದರೆ ಪ್ರಭಾವಿ ವ್ಯಕ್ತಿಗಳಿಂದಾಗಿ ಈತ ಪಾರಾಗಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಶ್ರೀಕೃಷ್ಣ ಹೋದ ಕಡೆಯೆಲ್ಲ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ತಂಗುತ್ತಿದ್ದು ಖರ್ಚುಗಳನ್ನು ಬೇರೆ ವ್ಯಕ್ತಿಗಳು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಈತನನ್ನು ಬಳಸಿಕೊಂಡು ರಾಜಕೀಯದ ಪ್ರಭಾವಿ ವ್ಯಕ್ತಿಗಳು ಹ್ಯಾಕಿಂಗ್ ನಡೆಸುತ್ತಿರಬಹುದು ಎಂಬ ಅನುಮಾನ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *

www.publictv.in