Connect with us

Bengaluru City

ರಾಜ್ಯದಲ್ಲಿ ರೆಮ್‍ಡೆಸಿವರ್, ಆಕ್ಸಿಜನ್ ಕೊರತೆ ಇಲ್ಲ: ಸುಧಾಕರ್

Published

on

ಬೆಂಗಳೂರು: ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ರೆಮ್‍ಡೆಸಿವರ್ ಕೊರತೆಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಕೊರತೆ ಇದ್ದಲ್ಲಿ ತಕ್ಷಣ ವ್ಯವಸ್ಥೆ ಮಾಡುತ್ತೇವೆ. ರೆಮ್‍ಡೆಸಿವರ್, ಆಕ್ಸಿಜನ್ ಕೊರತೆ ಆಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ಜಿಲ್ಲೆಗಳಲ್ಲಿ ರೆಮ್‍ಡೆಸಿವರ್ ಇಂಜಕ್ಷನ್ ಕೊರತೆ ಎನ್ನಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ರೆಮ್‍ಡೆಸಿವರ್ ತಯಾರು ಮಾಡುವ ಮೂರೂ ಸಂಸ್ಥೆಗಳಿವೆ. ಹೀಗಾಗಿ ಯಾವುದೇ ರೀತಿಯ ಕೊರತೆ ಇಲ್ಲ. ರೆಮ್‍ಡೆಸಿವರ್ ಇಡೀ ದೇಶದಲ್ಲಿ ತಯಾರಿಕೆ ಕಡಿಮೆ ಆಗಿದೆ. ಅಕ್ಟೋಬರ್ ನಿಂದ ಕೊರೊನಾ ಪ್ರಕರಣಗಳು ಕಡಿಮೆ ಆಗಿತ್ತು. ಹೀಗಾಗಿ ತಯಾರಿಕೆ ಕಡಿಮೆ ಆಗಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿ ಚುಚ್ಚುಮದ್ದು ಕೊರತೆ ಆಗಿಲ್ಲ, ಇದರಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಸೇರಿಕೊಂಡು ಒಟ್ಟಾಗಿ ಹೋರಾಟ ಮಾಡಿದರೆ ಕೊರೊನಾ ಎದುರಿಸಬಹುದು ಎಂದು ವಿವರಿಸಿದರು.

ಸಾವಿನ ಪ್ರಮಾಣ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, ಸಾವಿನ ಪ್ರಮಾಣವನ್ನು ಎಷ್ಟು ಸೋಂಕಿತರಲ್ಲಿ, ಎಷ್ಟು ಜನರ ಸಾವಾಗಿದೆ ಎಂದು ಅಳೆಯಬೇಕು. ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಅರ್ಧದಷ್ಟೂ ಇಲ್ಲ. ಸಾವಿನ ಪ್ರಮಾಣ ಸದ್ಯ ಶೇ.0.5 ಅಥವಾ 0.6 ರಷ್ಟು ಮಾತ್ರ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ. ಸಿಎಂ ಜೊತೆ ಚರ್ಚಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ವಲಯವಾರು ಕೊರೊನಾ ನಿಯಂತ್ರಣಕ್ಕೆ ಸಚಿವರು ಶ್ರಮ ಹಾಕುತ್ತಿದ್ದಾರೆ. ಜನರ ಸಹಭಾಗಿತ್ವ ಸಹ ಅಗತ್ಯ, ಅನೇಕ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಇದು ನಮ್ಮ ರಾಜ್ಯದಲ್ಲಿ ಆಗೋದು ಬೇಡ, ನಮ್ಮ ರಾಜ್ಯದ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪರಿಸ್ಥತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಹ ಪರಿಶೀಲಿಸಲಾಗುವುದು.

ಲಾಕ್‍ಡೌನ್, ಕರ್ಫ್ಯೂ ಬಗ್ಗೆ ಬೇರೆ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಸಿಎಂ, ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸಿತ್ತಿದ್ದಾರೆ. ಏನೇ ಆದರೂ ಜನರ ಸಹಕಾರ ಅಗತ್ಯ. ಜನ ಕೆಲವು ಕಾರ್ಯಕ್ರಮಗಳನ್ನು ಮುಂದೆ ಹಾಕುವುದರಿಂದ ಜೀವ ಹೋಗಲ್ಲ. ಜನರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *