Bengaluru City
ಇಂದ್ರಧನುಷ್ 3.0ಗೆ ಚಾಲನೆ, 13 ಕಡೆಗಳಲ್ಲಿ ಲಸಿಕೆ: ಡಾ.ಕೆ ಸುಧಾಕರ್
– ಫೆಬ್ರವರಿ 22 ರಿಂದ ಮಾರ್ಚ್ 22 ರವರೆಗೆ ಲಸಿಕೆ ಅಭಿಯಾನ
ಬೆಂಗಳೂರು: ಮಕ್ಕಳು ಹಾಗೂ ಗರ್ಭಿಣಿಯರಿಗೆ ಏಳು ರೋಗಗಳು ಬಾರದಂತೆ ತಡೆಯಲು ಕೇಂದ್ರ ಸರ್ಕಾರ ಇಂದ್ರಧನುಷ್ 3.0 ಅಭಿಯಾನ ಅನುಷ್ಠಾನಗೊಳಿಸಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ಮಾರ್ಚ್ 22 ರವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ 13 ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುವುದು. ಫೆಬ್ರವರಿ 22 ರಿಂದ ಮಾರ್ಚ್ 22 ರವರೆಗೆ ಈ ಅಭಿಯಾನ ನಡೆಸಲಾಗುವುದು. ಈವರೆಗೆ ತಲುಪಲಾಗದ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಈ ಲಸಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ 2014 ರ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿಂದ ಈ ಲಸಿಕೆ ಅಭಿಯಾನ ಆರಂಭಿಸಿತ್ತು. ನಂತರ 2017 ರ ಅಕ್ಟೋಬರ್ 8 ರಂದು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಗೆ ಚಾಲನೆ ನೀಡಲಾಗಿತ್ತು. ಈಗ ಮುಂದಿನ ಭಾಗವಾಗಿ 3.0 ಗೆ ಚಾಲನೆ ದೊರೆತಿದೆ. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿರುವಂತೆಯೇ, ಇಂದ್ರಧನುಷ್ ಏಳು ರೋಗಗಳು ಬಾರದಂತೆ ತಡೆಯುತ್ತದೆ ಎಂದರು.
ಡಿಫ್ತೀರಿಯಾ, ವೂಫಿಂಗ್ ಕಾಫ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೋಲಿಯೋ, ಮಿಸಲ್ಸ್, ಹೆಪಟೈಟಸ್-ಬಿ ಸೇರಿ ಏಳು ರೋಗಗಳು ಬಾರದಂತೆ ಲಸಿಕೆ ನೀಡಲಾಗುವುದು. ಬೆಂಗಳೂರು, ಬಿಬಿಎಂಪಿ ವ್ಯಾಪ್ತಿ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿರುವ ವಲಸಿಗರನ್ನು ಹೊಂದಿದ ಸ್ಲಂ, ಇಟ್ಟಿಗೆ ಸುಡುವ ಜಾಗ, ಅಲೆಮಾರಿಗಳು ವಾಸಿಸುವ ಸ್ಥಳ, ಕಟ್ಟಡ ನಿರ್ಮಾಣ ಸ್ಥಳ ಮೊದಲಾದ ಕಡೆಗಳಲ್ಲಿ ಮಕ್ಕಳಿಗೆ ಇಂದ್ರಧನುಷ್ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.