Thursday, 21st November 2019

ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸಲು ಮಾಜಿ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ಮುಖಂಡ ಆನಂದ್ ಭಾಸ್ಕರ್ ರಾಪೋಲು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಕ್ಟೋಬರ್ 15 ರಂದು ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರಿಗೆ ಆನಂದ್ ಭಾಸ್ಕರ್ ರಾಪೋಲು ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ವಿಶ್ವಸಂಸ್ಥೆ ಕಲಾಂರ ಹುಟ್ಟುಹಬ್ಬದ ದಿನವನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿದೆ. ಹೀಗಾಗಿ ದೇಶಾದ್ಯಂತ ವಿದ್ಯಾರ್ಥಿ ದಿನಾಚರಣೆಯಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಪ್ರಸ್ತಾಪಿಸಿದ್ದಾರೆ.

ಜೂನ್ 21ರಂದು ಇದೇ ರಾಷ್ಟ್ರವು ವಿಶ್ವ ಯೋಗ ದಿನಾಚರಣೆ ಮತ್ತು ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಆಚರಿಸುವಂತೆಯೇ, ಕಲಾಂ ಅವರ ಜನ್ಮದಿನವನ್ನು ಅದೇ ಉತ್ಸಾಹದಿಂದ ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಬೇಕೆಂದು ಆನಂದ್ ಭಾಸ್ಕರ್ ಒತ್ತಾಯಿಸಿದ್ದಾರೆ.

ಅಕ್ಟೋಬರ್ 15 ರಂದು ರಾಷ್ಟ್ರೀಯ ವಿದ್ಯಾರ್ಥಿ ದಿನವೆಂದು ಘೋಷಿಸಬೇಕು. ಹಾಗೆಯೇ ಎಲ್ಲಾ ಹಂತದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತವಾಗಿ ಈ ದಿನವನ್ನು ಆಚರಿಸುವಂತೆ ಸೂಚಿಸಲು ನಾನು ಪ್ರಾರ್ಥಿಸುತ್ತೇನೆ. ಇದರಿಂದಾಗಿ ಕ್ಷಿಪಣಿ ವ್ಯಕ್ತಿ ಕನಸು ಕಂಡಂತೆ, ನೀವು ಈ ದಿನವನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವ ಕ್ಷಣವನ್ನಾಗಿ ಬಳಸಿಕೊಳ್ಳಬಹುದು ಎಂದು ಆನಂದ್ ಭಾಸ್ಕರ್ ಅವರು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *