Bengaluru City
ಯಾವುದೇ ಬೇಸರ ಮಾಡಬೇಡ, ಸಂಜೆ ಸುದೀರ್ಘವಾಗಿ ಮಾತನಾಡೋಣ – ರಾಮುಲುಗೆ ಸಿಎಂ ಅಭಯ

ಬೆಂಗಳೂರು: ಸಚಿವ ಶ್ರೀರಾಮುಲು ಅವರು ಸಿಎಂ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಖಾತೆ ಬದಲಾವಣೆಯಾದ ಬಳಿಕ ಶ್ರೀರಾಮುಲು ಅವರು ಯಡಿಯೂರಪ್ಪನವರನ್ನು ಭೇಟಿ ಮಾಡಲು ಮಧ್ಯಾಹ್ನ 1:10 ವೇಳೆಗೆ ಆಗಮಿಸಿದ್ದರು. ಸುಮಾರು 1 ಗಂಟೆ ಕಾದರೂ ಸಿಎಂ ಭೇಟಿಗೆ ಅವಕಾಶ ನೀಡಿರಲಿಲ್ಲ.
ಸುಮಾರು 1 ಗಂಟೆ ಕಾದ ಬಳಿಕ ಯಡಿಯೂರಪ್ಪ ಶ್ರೀರಾಮುಲು ಅವರಿಗೆ ಅವಕಾಶ ನೀಡಿದರು. 5 ನಿಮಿಷ ಸಿಎಂ ಜೊತೆ ಮಾತನಾಡಿದ ಬಳಿಕ ಶ್ರೀರಾಮಲು ಕಾವೇರಿ ನಿವಾಸದಿಂದ ತೆರಳಿದರು. ಇದನ್ನೂ ಓದಿ:ಡಿಸಿಎಂ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಒಂದೇ ದಿನ ಡಬಲ್ ಶಾಕ್
ಭೇಟಿ ವೇಳೆ, ನನ್ನ ಗಮನಕ್ಕೆ ತರದೇ ಆರೋಗ್ಯ ಖಾತೆ ಬದಲಾವಣೆ ಮಾಡಿದ್ದು ಸರಿಯೇ ಎಂದು ಬಿಎಸ್ವೈಯನ್ನು ಶ್ರೀರಾಮುಲು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಎಂ, ಕೊರೊನಾ ಸಮಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಆಗುವುದು ಬೇಡ. ಸಮಾಜ ಕಲ್ಯಾಣ ಇಲಾಖೆಯನ್ನು ನೀನು ಮೊದಲೇ ಕೇಳಿದ್ದಿ. ಹೀಗಾಗಿ ಸಮಾಜ ಕಲ್ಯಾಣ ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೆ ಬೇಸರ ಮಾಡಬೇಡ. ಸಂಜೆ ಬಾ ಸುದೀರ್ಘವಾಗಿ ಮಾತನಾಡೋಣ ಎಂದು ಸಿಎಂ ಹೇಳಿ ಕಳುಹಿಸಿದರು.
ಸಿಎಂ ನಿವಾಸದಿಂದ ಹೊರಟ ಶ್ರೀರಾಮಲು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು. ಸರ್ಕಾರಿ ನಿವಾಸಕ್ಕೆ ಬಾರದ ಶ್ರೀರಾಮುಲು ದೇವನಹಳ್ಳಿ ಬಳಿ ಇರುವ ನಿವಾಸಕ್ಕೆ ಹೋಗಿದ್ದಾರೆ. ಸಿಎಂ ಭೇಟಿಯ ವೇಳೆ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ಆಗಮಿಸಿದ್ದು ಅಚ್ಚರಿಗೆ ಕಾರಣವಾಗಿದೆ.
