Monday, 19th August 2019

ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

ನವದೆಹಲಿ: ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದಿತ್ತು. ಆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಇರಲಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ದೆಹಲಿಯಲ್ಲಿ ನಮ್ಮದೇ ಸರ್ಕಾರ ಇರಲಿದೆ ಎಂದು ಆಪ್ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಪ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿ ಯಾರು ನಿರಾಶರಾಗಬೇಕಿಲ್ಲ. ದೆಹಲಿಯ ಜನತೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ನಿಮ್ಮ ಕಾಲರ್ ಮೇಲೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಚುನಾವಣೆ ಸಮಯದಲ್ಲಿ ಜನರು ಇದು ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ದೊಡ್ಡ ಚುನಾವಣೆ. ಹಾಗಾಗಿ ಮೋದಿ ಹೆಸರು ನೋಡಿ ಮತ ಹಾಕುತ್ತಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ನಮ್ಮ ಮತ ಎಂದು ಹೇಳುತ್ತಿದ್ದರು. ದೆಹಲಿಯ ಜನತೆ ನಿಮ್ಮನ್ನು ಹೊಗಳುತ್ತಿರುವ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬಾರದು. ದೊಡ್ಡ ಚುನಾವಣೆ ಮುಗಿದಿದ್ದು, ಸಣ್ಣ ಚುನಾವಣೆ ಬಂದಿದೆ. ಹೆಸರು ನೋಡಿ ಅಲ್ಲ, ಕೆಲಸ ನೋಡಿ ಮತ ಹಾಕಬೇಕೆಂದು ಜನತೆಯಲ್ಲಿ ಎಲ್ಲ ಕಾರ್ಯಕರ್ತರು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ದೆಹಲಿಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಶೂನ್ಯ ಫಲಿತಾಂಶ ದಾಖಲಿಸಿವೆ. ಕಾಂಗ್ರೆಸ್‍ನಿಂದ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಕಣಕ್ಕಿಳಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಹ ಸೋಲು ಕಂಡಿದ್ದಾರೆ.

Leave a Reply

Your email address will not be published. Required fields are marked *