Connect with us

Ayodhya Updates

ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

Published

on

ಲಕ್ನೋ: ಮುಖ್ಯಮಂತ್ರಿಯಾಗಿ ನಾನು ತಾರತಮ್ಯ ಮಾಡುವುದಿಲ್ಲ. ಆದರೆ ಹಿಂದೂವಾಗಿ ಅಯೋಧ್ಯೆಯ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮ ಯಶಸ್ವಿಯಾಗಲು ಯೋಗಿ ಆದಿತ್ಯನಾಥ್‌ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ಯೋಗಿ ಆದಿತ್ಯನಾಥ್‌ ಅವರನ್ನು ಸಂದರ್ಶನ ಮಾಡಿದೆ.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ನೀವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಅದೇ ರೀತಿಯಾಗಿ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಿದರೆ ನೀವು ಭಾಗವಹಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

ಈ ಪ್ರಶ್ನೆಗೆ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡುತ್ತಾರೆ ಎಂದು ನಿಮಗೆ ಅನಿಸುತ್ತೆಯೇ ಎಂದು ಮರು ಪ್ರಶ್ನೆ ಹಾಕಿದ ಯೋಗಿ, ನನ್ನನ್ನು ಆಹ್ವಾನಿಸುವ ಬಗ್ಗೆ ನನಗೆ ಆಗುವ ಸಮಸ್ಯೆಗಿಂತ ಅವರಿಗೆ ಜಾಸ್ತಿ ಸಮಸ್ಯೆಯಾಗಬಹುದು. ಈ ವಿಚಾರದಲ್ಲಿ ನನಗೆ ಯಾವುದೇ ಗೊಂದಲವಿಲ್ಲ ಎಂದು ಉತ್ತರಿಸಿದರು.

ಮುಂದುವರಿಸಿದ ಅವರು ಮುಖ್ಯಮಂತ್ರಿಯಾಗಿ ನಾನು ಯಾವುದೇ ಜಾತಿ, ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಆದರೆ ಒಬ್ಬ ಯೋಗಿ ಮತ್ತು ಹಿಂದೂವಾಗಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಯಾಕೆಂದರೆ ನನ್ನ ಧರ್ಮವನ್ನು ಪಾಲಿಸುವ ಹಕ್ಕು ನನಗಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಗಲಭೆಗಳು, ನಕ್ಸಲಿಸಂ, ಭಯೋತ್ಪಾದನೆಗೆ ಮೂಲ ಕಾರಣ ಹುಸಿ ಜಾತ್ಯಾತೀತತೆ. ಹುಸಿ ಜಾತ್ಯಾತೀತರೆಲ್ಲ ಹಿಂದೂಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ರಾಮ ಮಂದಿರ ದೇವಾಲಯದ ಆಂದೋಲನ ಹುಸಿ ಜಾತ್ಯಾತೀತ ವ್ಯಕ್ತಿಗಳ ಮುಖವಾಡವನ್ನು ಕಳಚಿದೆ ಎಂದರು.

ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಬಗ್ಗೆ ಮಾತನಾಡಿ, ಪ್ರತಿ ವರ್ಷ ನಡೆಯುವ ದೀಪೋತ್ಸವನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ನಾನು ಅವರಲ್ಲಿ ಪ್ರಶ್ನಿಸಿದಾಗ ಯಾವುದೇ ಧರ್ಮದ ಆಚರಣೆಯನ್ನು ಆಚರಿಸುವ ಹಕ್ಕು ನಮಗಿದೆ. ಯಾರೂ ಪೂರ್ವಜರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದರು ಎಂದು ಯೋಗಿ ಹೇಳಿದರು.

ಮುಸ್ಲಿಂ ಸಮುದಾಯದಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಇಕ್ಬಾಲ್‌ ಅನ್ಸಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸುಪ್ರೀಂ ತೀರ್ಪನ್ನು ಅವರು ಸ್ವಾಗತಿಸಿದ್ದು ಸಂತೋಷ ತಂದಿದೆ. ಇವರನ್ನು ನೋಡಿ ಇತರರು ಕಲಿಯುವ ವಿಚಾರ ಬಹಳಷ್ಟಿದೆ. ರಾಮ ಜನ್ಮಭೂಮಿ ಪ್ರಕರಣದ ಸಂಬಂಧ ಕೋರ್ಟ್‌ನಲ್ಲಿ ಅವರು ಹೋರಾಟ ಮಾಡಿದ್ದರೂ ಅವರಿಗೆ ಅಯೋಧ್ಯೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಉತ್ತರಿಸಿದರು.

ಹಿಂದೂ ವ್ಯಕ್ತಿಯೊಬ್ಬ ಪಾಕಿಸ್ತಾನ ಅಥವಾ ಅಘ್ಫಾನಿಸ್ಥಾನದಲ್ಲಿ ದೇವಾಲಯ ಸಂಬಂಧ ಹೋರಾಟ ನಡೆಸಿದ್ದರೆ ಆತ ಸುರಕ್ಷಿತವಾಗಿರುತ್ತಿದ್ದನೇ ಎಂದು ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದರು.

Click to comment

Leave a Reply

Your email address will not be published. Required fields are marked *