Connect with us

ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟ ಶ್ವಾನ

ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟ ಶ್ವಾನ

– ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ
– ಮಾಲೀಕನ ಸಮಾಧಿ ಪಕ್ಕದಲ್ಲೇ ಮಣ್ಣಾದ ಶ್ವಾನ

ಬೆಳಗಾವಿ: ಸಾಕಿ ಸಲುಹಿದ ಮಾಲೀಕನ ಅಗಲಿಕೆಯಿಂದ ಶ್ವಾನವೊಂದು ಅನ್ನ ನೀರು ತ್ಯಜಿಸಿ ಮಾಲೀಕನಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಮಾಲೀಕನ ನೆನಪಲ್ಲೇ ಕೊರಗಿ ಕೊರಗಿ ಪ್ರಾಣ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

ಅವರಾದಿ ಗ್ರಾಮದ ನಿವಾಸಿ ಶಂಕ್ರಪ್ಪ ಮಡಿವಾಳರ ಸಾವನ್ನಪ್ಪಿದ್ದರು. ಆದರೆ ಅವರ ಸಾಕುನಾಯಿ ಕಡ್ಡಿ ಮಾಲೀಕನ ಅಕಾಲಿಕ ನಿಧನದಿಂದ ಅವರು ಸುತ್ತುತ್ತಿದ್ದ ಜಾಗವನ್ನೆಲ್ಲ ಸುತ್ತಿ ಮಾಲೀಕನಿಗಾಗಿ ಹುಡುಕಾಟ ನಡೆಸಿತ್ತು. ಕೊನೆಗೆ ಶ್ವಾನ ಕಡ್ಡಿ ಮಾಲೀಕನಿಗಾಗಿ ಹುಡುಕಿ ಹುಡುಕಿ ಆತನಿಲ್ಲದ ಕೊರಗಲ್ಲಿ ಊಟವನ್ನೂ ಸಹ ತ್ಯಜಿಸಿ ಸಾವನ್ನಪ್ಪಿದೆ. ಇದೇ ಸೆಪ್ಟೆಂಬರ್ 6ರಂದು ಶಂಕ್ರಪ್ಪ ಮಡಿವಾಳರ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದರು.

ಮೃತ ಶಂಕ್ರಪ್ಪ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹಾಲು ಮಾರಾಟ ಮಾಡುತ್ತಿದ್ದರು. ಹೀಗಾಗಿ ಶಂಕ್ರಪ್ಪ ಅಲ್ಲಿಗೆ ಹೋಗಿರಬಹುದು ಎಂದು ಶ್ವಾನ ಕಡ್ಡಿ ಅಲ್ಲಿಯೂ ಸಹ ಹುಡುಕಾಟ ನಡೆಸಿತ್ತು. ಕಳೆದ ಒಂದು ವಾರದಿಂದ ಮಾಲೀಕನ ನೆನಪಲ್ಲಿ ಊಟವನ್ನು ಸಹ ತ್ಯಜಿಸಿದ್ದ ಕಡ್ಡಿ ಆತನಿಗಾಗಿ ಊರೊಳಗೆ ಹುಡುಕದ ಜಾಗವಿಲ್ಲ. ದೂರದ ಮಹಾಲಿಂಗಪುರದ ಗಲ್ಲಿ ಗಲ್ಲಿಗೂ ಸಹ ತಿರುಗಿದ್ದ ಕಡ್ಡಿ ಕೊನೆಗೆ ಮಾಲೀಕನಿಲ್ಲದ ಕೊರಗಲ್ಲಿ ಸಾವನ್ನಪ್ಪಿದೆ ಎಂದು ಗ್ರಾಮಸ್ಥ ಪ್ರಕಾಶ್ ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶ್ವಾನ ಕಡ್ಡಿಯ ಮೃತದೇಹವನ್ನು ಊರಿಗೆ ತಂದು ಊರಿನ ಪ್ರಮುಖರ ಸಮ್ಮುಖದಲ್ಲಿ ಮೆರವಣಿಗೆ ಮಾಡಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಾಲೀಕ ಶಂಕ್ರಪ್ಪ ಅವರ ಸಮಾಧಿ ಪಕ್ಕದಲ್ಲೇ ಮಣ್ಣು ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement
Advertisement