Wednesday, 19th February 2020

Recent News

ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

– ಇಬ್ಬರಿಗೂ ಕೆಮಿಕಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ರು

ಜೈಪುರ: ಪತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರನನ್ನು ತಾಯಿ ಮತ್ತು ಪತ್ನಿ ಸಜೀವವಾಗಿ ಸುಟ್ಟ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಭರತ್‍ಪುರದಲ್ಲಿ ಈ ಘಟನೆ ನಡೆದಿದೆ. ದೀಪಾ ದೇವಿ(25) ಮತ್ತು ಸೂರ್ಯ(6) ಮೃತ ದುರ್ದೈವಿಗಳು. ವೈದ್ಯ ಸಂದೀಪ್ ಗುಪ್ತ ತಾಯಿ ಹಾಗೂ ಪತ್ನಿ ಸೀಮಾ ಗುಪ್ತ ಕೊಲೆ ಮಾಡಿದ ಆರೋಪಿಗಳು.

ವೈದ್ಯ ಸಂದೀಪ್ ಗುಪ್ತ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ದೀಪಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಸಂದೀಪ್ ಹಾಗೂ ದೀಪಾ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೆ ದೀಪಾ ರಿಸೆಪ್ಷನಿಸ್ಟ್ ಕೆಲಸ ಬಿಟ್ಟ ಬಳಿಕ ಆಕೆಗೆ ಸಂದೀಪ್ ಒಂದು ಬ್ಯೂಟಿಪಾರ್ಲರ್ ಹಾಗೂ ಮನೆಯನ್ನು ಕೂಡ ಮಾಡಿಕೊಟ್ಟಿದ್ದನು. ಅವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದನು.

ಈ ಬಗ್ಗೆ ಪತ್ನಿ ಸೀಮಾಗೆ ವಿಷಯ ತಿಳಿದ ತಕ್ಷಣ ಅತ್ತೆಯ ಬಳಿ ಪತಿಯ ಅಕ್ರಮ ಸಂಬಂಧದ ಗುಟ್ಟು ಬಿಚ್ಚಿಟ್ಟಿದ್ದಾಳೆ. ಮಗನ ಕರ್ಮಕಾಂಡ ಕೇಳಿ ಸಿಟ್ಟಿಗೆದ್ದ ತಾಯಿ ಸೊಸೆ ಜೊತೆ ಸೇರಿ ದೀಪಾಳನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ. ಬುಧವಾರ ದೀಪಾಳ ಮನೆಗೆ ಹೋಗಿ ಆಕೆ ಹಾಗೂ ಸೂರ್ಯ ಮೇಲೆ ಕೆಮಿಕಲ್ ಸ್ಪ್ರೇ ಮಾಡಿ, ಇಬ್ಬರಿಗೂ ಬೆಂಕಿ ಹಚ್ಚಿ ರೂಮ್‍ನಲ್ಲಿ ಕೂಡಿ ಹಾಕಿ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ.

ಇತ್ತ ತಾಯಿ, ಮಗ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ. ಮೊದಲು ತಾಯಿ, ಮಗ ಸಿಲಿಂಡರ್ ಸ್ಫೋಟ ಅಥವಾ ಬೆಂಕಿ ಅವಘಡದಿಂದ ಸಾವನ್ನಪ್ಪಿದ್ದಾರೆ ಎಂದು ನೆರೆಹೊರೆಯವರು ತಿಳಿದಿದ್ದರು. ಆದರೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡ ಬಳಿಕ ಸತ್ಯಾಂಶ ಹೊರಬಿದ್ದಿದೆ. ದೀಪಾ ಬಗ್ಗೆ ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದಾಗ ವೈದ್ಯನೊಂದಿಗೆ ಆಕೆಯ ಅಕ್ರಮ ಸಂಬಂಧದ ಬಗ್ಗೆ ಬಯಲಾಗಿದೆ.

ಈ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಸದ್ಯ ಸೀಮಾ ಹಾಗೂ ಸಂದೀಪ್ ತಾಯಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *