Connect with us

ದೆಹಲಿ ಆಸ್ಪತ್ರೆಯ 80 ಮಂದಿ ವೈದ್ಯರಿಗೆ ಕೊರೊನಾ

ದೆಹಲಿ ಆಸ್ಪತ್ರೆಯ 80 ಮಂದಿ ವೈದ್ಯರಿಗೆ ಕೊರೊನಾ

ನವದೆಹಲಿ: ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ 80 ಮಂದಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೂ ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದೆ. ಸುಮಾರು ಮೂರು ದಶಕಗಳ ಕಾಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ವೈದ್ಯರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

ಕೋವಿಡ್-19 ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ 80 ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ 12 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಉಳಿದ ವೈದ್ಯರು ಹೋಂ ಐಸೋಲೇಶನ್‍ನಲ್ಲಿದ್ದಾರೆ.

ಆಸ್ಪತ್ರೆಯ ಹಿರಿಯ ಸರ್ಜನ್ ಡಾ.ಎ.ಕೆ ರಾವತ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇವರು 27 ವರ್ಷಗಳ ಕಾಲ ಸರೋಜ್ ಆಸ್ಪತ್ರೆಗೆ ಸೇವೆ ಸಲ್ಲಿಸಿದ್ದರು. ಇದೀಗ ಇವರ ಸಾವಿನಿಂದ ಆಸ್ಪತ್ರೆಯ ಸಿಬ್ಬಂದಿಗೆ ಭಾರಿ ಆಘಾತವನ್ನುಂಟು ಮಾಡಿದೆ.

ದೆಹಲಿ ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೂ 300ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರೋಜ್ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ಅಲ್ಲದೆ ಭಾನುವಾರ ದೆಹಲಿಯ ಗುರು ತೇಜ್ ಬಹದ್ದೂರ್(ಜಿಟಿಬಿ) ಆಸ್ಪತ್ರೆಯ ಯುವ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕೆಲವೇ ಗಂಟೆಗಳಲ್ಲಿ ಕೋವಿಡ್‍ಗೆ ಬಲಿಯಾಗಿದ್ದಾರೆ.

ದೆಹಲಿಯಲ್ಲಿ ಭಾನುವಾರ ಕೊರೊನಾದಿಂದ 273 ಮಂದಿ ಮೃತಪಟ್ಟಿದ್ದು, 13,336 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

Advertisement
Advertisement