Connect with us

Chikkamagaluru

ವಿವಾಹವಾಗದೆ ಮಗುವಿಗೆ ಜನ್ಮ ನೀಡಿದ ತಾಯಿ- 50 ಸಾವಿರಕ್ಕೆ ಮಗು ಮಾರಿದ ಸರ್ಕಾರಿ ವೈದ್ಯರು

Published

on

– ಎಂಟು ತಿಂಗಳ ಬಳಿಕ ಪ್ರಕರಣ ಬೆಳಕಿಗೆ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಹೆಣ್ಣು ಮಗುವನ್ನ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವತಿ ಕಳೆದ ಮಾರ್ಚ್ 14ರಂದು ಹೆರಿಗೆ ನೋವಿನಿಂದ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರಿಲ್ಲದ ಕಾರಣ ಅಲ್ಲಿಂದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಯುತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ತಾಯಿಗೆ ಮದುವೆಯಾಗದ ಕಾರಣ ಕೊಪ್ಪ ತಾಲೂಕು ಆಸ್ಪತ್ರೆ ವೈದ್ಯ ಬಾಲಕೃಷ್ಣ, ನಿನಗೆ ಮಗುವನ್ನು ಸಾಕಲು ಆಗುವುದಿಲ್ಲ. ಮಗುವನ್ನು ಇಲ್ಲೇ ಬಿಟ್ಟು ಹೋಗು ಎಂದಿದ್ದು, ಪೊಲೀಸರು ಬರಬೇಕು ಎಂದು ತಿಳಿಸಿದ್ದರು.

ಮದುವೆಗೂ ಮುಂಚೆ ಮಗು ಜನಿಸಿದ್ದರಿಂದ ಹೆದರಿದ ಯುವತಿ ಮಗುವನ್ನು ಯಾರಿಗಾದರೂ ಕೊಡುವಂತೆ ಹೇಳಿದ್ದಳು. ಆಗ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾ ಅವರಿಗೆ ಮಗುವನ್ನು ಮಾರಾಟ ಮಾಡಿದ್ದರು. ಮಗುವಿನ ತಾಯಿಗೆ ವೈದ್ಯರು 5,000 ಹಣ ನೀಡಿದ್ದರು. ಆದರೆ ಈಗ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಮಗುವಿನ ತಾಯಿ ವೈದ್ಯ ಬಾಲಕೃಷ್ಣ ಹಾಗೂ ಇಬ್ಬರು ದಾದಿಯರಾದ ಶೋಭಾ ಹಾಗೂ ರೇಷ್ಮಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ. ವೈದ್ಯರು ನನಗೆ 5,000 ರೂ. ಮಾತ್ರ ನೀಡಿ, ನನ್ನ ಮಗುವನ್ನು 50 ಸಾವಿರಕ್ಕೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾಳೆ.

ಮಗುವನ್ನು ನೇರವಾಗಿ ಮಾರಾಟ ಮಾಡುವುದಾಗಲೀ ಅಥವಾ ಕೊಳ್ಳುವುದಾಗಲಿ ಕಾನೂನು ಬಾಹಿರ. ಮಕ್ಕಳಿಲ್ಲದವರು ಮಗುವನ್ನು ದತ್ತು ಪಡೆಯುವುದಾದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕೋರ್ಟ್ ಮೂಲಕ ಮಗುವನ್ನು ಪಡೆಯಬೇಕು. ಆದರೆ ಇಲ್ಲಿ ಹಣಕ್ಕಾಗಿ ಮಗು ಮಾರಾಟವಾಗಿರುವುದರಿಂದ ಇದೀಗ ಕೊಪ್ಪ ಠಾಣೆಯಲ್ಲಿ ಮಗು ಮಾರಾಟ ಮಾಡಿದವರು ಹಾಗೂ ಕೊಂಡವರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಟ್ಟಿದ್ದಾರೆ. ಮಗುವಿನ ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿ ಶಿವಮೊಗ್ಗದ ಎನ್‍ಜಿಒ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
8 ತಿಂಗಳ ಬಳಿಕ ಆರೋಗ್ಯ ಹದಗೆಟ್ಟ ಕಾರಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾದ ಮಗುವಿನ ತಾಯಿ ಮಾನಸಿಕ ಖಿನ್ನತೆಯಿಂದ ಮಗು-ಮಗು ಎಂದು ಕನವರಿಸುತ್ತಿದ್ದಳು. ಆಸ್ಪತ್ರೆ ವೈದ್ಯರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಶಿವಮೊಗ್ಗದ ಮಕ್ಕಳ ಪಾಲನ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲಿಂದ ಚಿಕ್ಕಮಗಳೂರು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಚಾರಣೆ ಕೈಗೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ರಿಜಿಸ್ಟ್ರಾರ್ ನಲ್ಲಿ ಸುಳ್ಳು ಬರವಣಿಗೆ:
ಮಾರ್ಚ್ 14 ರಂದು ಹೆರಿಗೆಯಾದರೂ ಕೇಸ್ ಶೀಟ್ ನಲ್ಲಿ ನರ್ಸ್ ಹೆರಿಗೆಯ ಮಾಹಿತಿ ಬರೆದಿರುವುದಿಲ್ಲ. ಅವರ ಹೆಸರಿಗೆ ಮಗುವಿನ ಜನನ ಪ್ರಮಾಣ ಪತ್ರ ಸಿಗುವಂತೆ ಮಾಡಲು ಅದೇ ಕೇಸ್ ಶೀಟ್ ನಲ್ಲಿ ಬೇರೊಬ್ಬರ ಹೆಸರು ಬರೆದಿರುತ್ತಾರೆ. ಅವರು ಗರ್ಭಿಣಿಯೇ ಆಗಿರುವುದಿಲ್ಲ. ಅವರ ವಿಳಾಸಕ್ಕೆ ಹೋಗಿ ನೋಡಿದಾಗ ಅವರು ಬೇರೆಲ್ಲಿಂದಲೋ ಮಗುವನ್ನ ತಂದು ಸಾಕುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಎಲ್ಲ ಅಂಶಗಳ ಆಧಾರದ ಮೇಲೆ ಕೊಪ್ಪ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಘಾನವಿ ನೀಡಿದ ದೂರಿನ ಅನ್ವಯ ವೈದ್ಯ ಬಾಲಕೃಷ್ಣ, ಶೂಶ್ರುಕಿ ಶೋಭಾ, ರೇಷ್ಮಾ ಹಾಗೂ ಮಗುವನ್ನ ಖರೀದಿಸಿದ ಪ್ರೇಮಾ ವಿರುದ್ಧ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in