Connect with us

Bengaluru City

ಹೈಕೋರ್ಟಿನಲ್ಲಿ ಡಿಕೆಶಿ ಅರ್ಜಿ: ಬಿವಿ ಆಚಾರ್ಯರ ವಾದ ಹೀಗಿತ್ತು

Published

on

ಬೆಂಗಳೂರು: ವಿಚಾರಣೆಗೆ ಹೋದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುತ್ತಾರೆ ಎಂಬ ಭಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಿತ್ತು. ಹೀಗಾಗಿ ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್ ಪೀಠದಲ್ಲೂ ಅರ್ಜಿ ಸಲ್ಲಿಸಿದ್ದರು.

ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ಗುರುವಾರ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿಯಿತು. ಡಿ.ಕೆ. ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿದರು. ಆದರೆ ಮಾಜಿ ಸಚಿವರ ಪರ ವಕೀಲರ ವಾದವನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ.

ಕೋರ್ಟಿನಲ್ಲಿ ನಡೆದಿದ್ದೇನು?:
ಡಿ.ಕೆ.ಶಿವಕುಮಾರ್ ಅವರ ಪರ ಮೊದಲು ವಾದ ಮಂಡಿಸಿದ ಬಿವಿ ಆಚಾರ್ಯ ಅವರು, ನಾವು ನಿರೀಕ್ಷಣಾ ಜಾಮೀನನ್ನು ಕೇಳುತ್ತಿಲ್ಲ. ಇ.ಡಿ ನೀಡಿದ್ದ ಸಮನ್ಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ಅಲ್ಲಿಯವರೆಗೂ ಮಾಜಿ ಸಚಿವರನ್ನು ಬಂಧಿಸದಂತೆ ಇ.ಡಿಗೆ ಆದೇಶಿಸಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದರು.

ಆದರೆ ಇಡಿ ಪರ ವಕೀಲರು, ಕಳೆದ 9 ತಿಂಗಳಿಂದ ಇದೇ ನಡೆಯುತ್ತಿದೆ. ವಿಚಾರಣೆ ಅಂದ ಮಾತ್ರಕ್ಕೆ ಬಂಧಿಸುತ್ತಾರೆ ಎಂದಲ್ಲ. ಬಂಧಿಸುವುದು ಬಿಡುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ಪ್ರತಿಯಾಗಿ ಮಂಡಿಸಿದರು. ಆಗ ಬಿವಿ ಆಚಾರ್ಯ ಅವರು, ನಮ್ಮ ಕಕ್ಷಿದಾರ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಸೆಪ್ಟೆಂಬರ್ 5 ಅಥವಾ 6 ರಂದು ದಿನಾಂಕ ನಿಗದಿ ಮಾಡುವಂತೆ ನಿರ್ದೇಶಿಸಿ ಎಂದು ಕೋರ್ಟಿಗೆ ಕೋರಿಕೊಂಡರು.

ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು, ಇಂದೇ ಮೇಲ್ಮನವಿ ಅರ್ಜಿ ಸಲ್ಲಿಸಬಹುದಲ್ಲ. ನಾಳೆ(ಶನಿವಾರ)ಯವರೆಗೂ ಕಾಯುವ ಅಗತ್ಯವೇನು. ನಾಳೆ ವಿಚಾರಣೆಗೆ ಹಾಜರಾಗುತ್ತೀರಾ ಎಂದು ಪಶ್ರಿಸಿದರು. ಆಗ ಬಿವಿ ಆಚಾರ್ಯ ಅವರು, ನಮಗಿನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಇವತ್ತೇ ಮೇಲ್ಮನವಿ ಸಲ್ಲಿಸುವುದು ಕಷ್ಟ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಾಧೀಶರು, ಆದೇಶ ಪ್ರತಿ ವೆಬ್‍ಸೈಟ್‍ನಲ್ಲಿ ಸಿಗುತ್ತೆ ಅಲ್ವಾ? ಅದನ್ನು ಇಂದೇ ಮೇಲ್ಮನವಿ ಸಲ್ಲಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು. ಇದರಿಂದಾಗಿ ಬಿವಿ ಆಚಾರ್ಯ ಅವರು, ಇಡಿ ಅಧಿಕಾರಿಗಳು ಬಂಧಿಸದಿದ್ದರೆ ಡಿಕೆ ಶಿವಕುಮಾರ್ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

ಸಮನ್ಸ್ ಗೆ ಸಂಬಂಧಿಸಿದಂತೆ ಗುರುವಾರ ಆದೇಶದಲ್ಲಿಯೇ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಆದೇಶ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಮಧ್ಯಂತರ ರಕ್ಷಣೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.