Connect with us

Bengaluru City

ಬಿಜೆಪಿ ಪ್ರಚೋದನೆ ಕೊಡೋ ಕೆಲಸ ಮಾಡ್ತಿದೆ: ಡಿಕೆಶಿ

Published

on

– ನವೀನ್ ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ
– ನವೀನ್‍ಗೆ ಬಿಜೆಪಿ ಜೊತೆ ಸಂಪರ್ಕವಿದೆ

ಬೆಂಗಳೂರು: ಬಿಜೆಪಿ ಪ್ರತಿಹಂತದಲ್ಲೂ ಹೇಳಿಕೆ ಕೊಡುತ್ತಿದೆ. ಆದರೆ ಏನೇನು ಪ್ರಚೋದನೆ ಬೇಕೋ ಎಲ್ಲವನ್ನು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಗಲಭೆಯ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಫೇಸ್‍ಬುಕ್‍ನಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಆಗ ಪೊಲೀಸರು ಸರಿಯಾದ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ. ದೂರು ಕೊಡಲು ಬಂದಾಗಲೇ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿತ್ತು. ಯಾರು ಏನೇ ಮಾಡಿದ್ದರೂ ತಪ್ಪು, ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದವರದ್ದು, ಮನೆಗೆ ಬೆಂಕಿ ಹಚ್ಚಿದವರದ್ದು ತಪ್ಪು ಇದೆ. ನಾವು ಯಾರ ಬೆಂಬಲಕ್ಕೂ ಇಲ್ಲ. ಆದರೆ ಅಮಾಯಕರ ಆಸ್ತಿ-ಪಾಸ್ತಿ ಹಾಳಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪ್ರತಿಹಂತದಲ್ಲೂ ಹೇಳಿಕೆ ಕೊಡುತ್ತಿದೆ. ಇದಕ್ಕೆ ಸೀಮೆಎಣ್ಣೆ, ತುಪ್ಪ ಹಾಕುತ್ತಿದೆ. ಆದರೆ ಯಾರು ನೀರು ಹಾಕಲು ಪ್ರಯತ್ನ ಮಾಡುತ್ತಿಲ್ಲ. ನಾನು ಯಾರ ಹೆಸರು ಹೇಳಲ್ಲ. ಆದರೆ ಏನೇನು ಪ್ರಚೋದನೆ ಬೇಕೋ ಎಲ್ಲವನ್ನು ಮಾಡುತ್ತಿದೆ. ನವೀನ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದ. ಹೀಗಾಗಿ ನವೀನ್ ಸಂಪರ್ಕ ಬಿಜೆಪಿ ಜೊತೆಯಿದೆ ಎಂದು ನವೀನ್ ಫೇಸ್‍ಬುಕ್ ಪೋಸ್ಟನ್ನು ಡಿಕೆಶಿ ಪ್ರದರ್ಶಿಸಿದರು.

ಶಾಸಕರ ಜೊತೆ ನಾನು ಮಂಗಳವಾರ ರಾತ್ರಿ 9 ಗಂಟೆಯವರೆಗೂ ಇದ್ವಿ. ಅವರೇನಾದರೂ ಬೇರೆ ಕಡೆ ಶಿಫ್ಟ್ ಆಗಿಲ್ಲ ಎಂದರೆ ಅವರ ಪ್ರಾಣಕ್ಕೆ ಅಪಾಯವಿತ್ತು. ನಮ್ಮ ಇಬ್ಬರು ಶಾಸಕರು ಅವರ ಜೊತೆ ಹೋಗಿದ್ದಾರೆ. ನಾನು ಕೂಡ ಸಂಪರ್ಕದಲ್ಲಿದ್ದೇನೆ. ರಾತ್ರಿನೂ ಮಾತನಾಡಿದ್ದೇನೆ ಎಂದರು.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವುದು ಅಮಾನವೀಯ ಘಟನೆ, ಯಾರೇ ಮಾಡಿದರೂ ನಾವು ಇದನ್ನು ಖಂಡಿಸುತ್ತೇವೆ. ಕಾನೂನನ್ನ ಯಾರೂ ಕೂಡ ಕೈಗೆ ತೆಗೆದುಕೊಳ್ಳಬಾರದು. ಈ ರೀತಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಕೆಶಿ ಹೇಳಿದರು.

ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಹಿಂದೆ ಸಂಚು ಇದೆ. ಹೀಗಾಗಿ ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ ನಾಯಕರ ತಂಡ ಹೋಗುತ್ತಿದೆ. ಮುಖ್ಯಮಂತ್ರಿಗಳ ದಿಟ್ಟ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಅವರ ಪಕ್ಷದ ಶಾಸಕರು ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯವರು ಇಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡದಂತೆ ಸಿಎಂ ತಡೆಯಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Click to comment

Leave a Reply

Your email address will not be published. Required fields are marked *