Connect with us

Bengaluru City

ಐಶ್ವರ್ಯ, ಅಮರ್ಥ್ಯ ನಿಶ್ಚಿತಾರ್ಥ ಸಂಭ್ರಮ – ಬಿಎಸ್‍ವೈ, ಅಶೋಕ್ ಭಾಗಿ

Published

on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿದ್ದು, ಕಡಿಮೆ ಜನರನ್ನು ಆಹ್ವಾನಿಸಿದ್ದರೂ ಸಂಭ್ರಮಕ್ಕೆ ಮಾತ್ರ ಕೊರತೆ ಇಲ್ಲ ಎಂಬಂತೆ ನಡೆಸಲಾಗುತ್ತಿದೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಆಯ್ದ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಒಟ್ಟು 250 ಜನರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್.ಅಶೋಕ್ ಆಗಮಿಸಿ ಹಾರೈಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

ಉತ್ತರ ಪ್ರದೇಶದ ಖ್ಯಾತ ಜ್ಯೋತಿಷಿ ಪಂಡಿತ್ ಅವರ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಿಶ್ಚಿತಾರ್ಥ ನಡೆಯಿತು. ಬಳಿಕ ಸಿಎಂ ಆಗಮಿಸಿ ನವ ಜೋಡಿಗೆ ಹಾರೈಸಿದರು. ಸಭಾಂಗಣವೆಲ್ಲ ಗುಲಾಬಿಮಯವಾಗಿದ್ದು, ಐಶ್ವರ್ಯ ಹಾಗೂ ಅಮರ್ಥ್ಯ ಪಿಂಕ್ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸ ಹಾಗೂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಎಂಗೇಜ್ಮೆಂಟ್ ಸಡಗರ ಮನೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ.

ಹೋಟೆಲ್‍ನಲ್ಲಿ ಒಟ್ಟು 50 ರೂಮ್ ಬುಕ್ ಮಾಡಲಾಗಿದ್ದು, ಒಟ್ಟು 250 ಮಂದಿಗೆ ಆಹ್ವಾನ ನೀಡಲಾಗಿದೆ. ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆಮಂತ್ರಣ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಆಮಂತ್ರಣ ನೀಡಲಾಗಿಲ್ಲ. ನಿನ್ನೆ ರಾತ್ರಿಯೇ ಕುಟುಂಬದ ಸದಸ್ಯರು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.

ಅಮರ್ಥ್ಯ ಕಾಫಿ ಡೇ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in