Connect with us

Bengaluru City

ಠಾಣೆಗೆ ಬೆಂಕಿ ಬಿದ್ರೂ ದೇಶಪ್ರೇಮ ಮೆರೆದ ಡಿಜೆ ಹಳ್ಳಿ ಪೊಲೀಸರು

Published

on

ಬೆಂಗಳೂರು: ಪೊಲೀಸ್ ಠಾಣೆಗೆ ಬೆಂಕಿ ಬಿದ್ದರೂ ಡಿಜಿ ಹಳ್ಳಿ ಪೊಲೀಸರು ದೇಶಪ್ರೇಮ ಮೆರೆದಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.

ಆರೋಪಿಗಳು ಮಾಡಿದ್ದ ಗಲಭೆಯಿಂದ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ವಾಹನಗಳೆಲ್ಲ ಸುಟ್ಟು ಕರಕಲಾಗಿವೆ. ಅಲ್ಲದೇ ಠಾಣೆಯ ಒಳಗೆ, ಹೊರಗೂ ಹಾನಿಯಾಗಿದೆ. ಆದರೂ ಠಾಣೆಯ ಹೊರಗಡೆ ಸಿಬ್ಬಂದಿ ದೇಶಕ್ಕೆ ಗೌರವ ಸೂಚಿಸಿದ್ದಾರೆ. ಮೊದಲಿಗೆ ಕಿಡಿಗೇಡಿಗಳಿಂದ ಹಾನಿಯಾಗಿದ್ದ ಧ್ವಜ ಸ್ತಂಭವನ್ನು ಡಿಜೆ ಹಳ್ಳಿ ಪೊಲೀಸರು ಸ್ವಚ್ಛಗೊಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಸಗುಡಿಸಿ, ಧ್ವಜ ಸ್ತಂಭ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಠಾಣೆಯ ಮುಂದೆ ಸಿಂಗಾರ ಮಾಡಲಾಗಿತ್ತು. ನಂತರ ಎಸಿಪಿ ರವಿ ಪ್ರಸಾದ್ ಅವರು ಧ್ವಜಾರೋಹಣ ಮಾಡಿದ್ದಾರೆ.

ಡಿಸಿಪಿ ಶರಣಪ್ಪ ಅವರು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಲು ಮಾತನಾಡಿದ್ದಾರೆ. ಎಲ್ಲರಿಗೂ ಪೊಲೀಸ್ ಆಗುವುದಕ್ಕೆ ಅವಕಾಶ ಇದಿಯಾ? ನಿಮ್ಮ ಜೊತೆ ಪರೀಕ್ಷೆ ಬರೆದವರೆಲ್ಲಾ ಆಯ್ಕೆಯಾಗಿದ್ದಾರ ಎಂದು ಪ್ರಶ್ನೆ ಮಾಡಿದರು. ನಾವೆಲ್ಲ ಯೂನಿಫಾರ್ಮ್ ಧರಿಸುವುದಕ್ಕೆ ಲಕ್ಕಿಯಾಗಿದ್ದೇವೆ. ಬೆಂಗಳೂರು ಪೊಲೀಸರಾಗಿ ಕೆಲಸ ಮಾಡೋದು ಅದೃಷ್ಟ. ಕಳೆದ ನಾಲ್ಕೈದು ದಿನದ ಬಂದೋಬಸ್ತ್ ಮಾಡಿದ್ದರ ಪ್ರತಿಫಲವಾಗಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಯಿತು. ನೀವು ಒಳ್ಳೆಯ ರೀತಿ ಕೆಲಸ ಮಾಡಿದ್ದೀರಿ ಎಂದು ಹೇಳಿದರು.

ಇದು ಎಷ್ಟು ದಿನದವರೆಗೆ ಮುಂದುವರಿಯುತ್ತೋ ಅಲ್ಲಿಯವರೆಗೂ ಇದೇ ಉತ್ಸಾಹ ಇರಬೇಕು. ತರಬೇತಿ ಮಾಡಿದಾಗ ಕಲಿತ ವಿದ್ಯೆ ತೋರಿಸಲು ಅವಕಾಶ ಸಿಕ್ಕಿದೆ. ಪರಿಸ್ಥಿತಿ ನಿಯಂತ್ರಣವಾಗಿದೆ ಎಂದು ನಿರ್ಲಕ್ಷ ಮಾಡಬೇಡಿ. ಮೈ ಮರೆತರೆ ಮತ್ತೊಂದು ಏನಾದರೂ ಆಗಬಹುದು. ನಿಮ್ಮ ನಿಮ್ಮ ಪಾಯಿಂಟ್‍ಗಳಲ್ಲಿ ಹುಷಾರಾಗಿ ಕೆಲಸ ಮಾಡಿ. ಯಾವುದೇ ರೀತಿಯ ಮುಲಾಜು, ಫ್ರೀ ಕೊಡಬೇಡಿ ಎಂದು ಪೊಲೀಸರಿಗೆ ಡಿಸಿಪಿ ಸೂಚನೆ ನೀಡಿದರು.

Click to comment

Leave a Reply

Your email address will not be published. Required fields are marked *