Saturday, 22nd February 2020

Recent News

ನಮಗೆ ಸಿಗದಿದ್ರೆ ಪರವಾಗಿಲ್ಲ ನಮ್ಮವರಿಗೆ ಸಿಕ್ಕಿದ್ರೆ ಸಾಕು- ಅನರ್ಹ ಶಾಸಕರ ಎ, ಬಿ ಪ್ಲಾನ್ ರೆಡಿ!

ಬೆಂಗಳೂರು: ಒಂದೆಡೆ ರೆಬೆಲ್ ಶಾಸಕರು ಹಾಕಿದ ಅರ್ಜಿ ಸುಪ್ರೀಂಕೋರ್ಟ್ ನಲ್ಲಿದೆ. ಮತ್ತೊಂದೆಡೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಅರ್ಧ ಕ್ಯಾಬಿನೆಟ್ ರಚನೆಯಾಗಿದೆ. ಇದೆಲ್ಲದರ ನಡುವೆ ಅನರ್ಹ ಶಾಸಕರಿಗೆ ತಮ್ಮ ಮುಂದಿನ ಕಥೆ ಬಗ್ಗೆ ಟೆನ್ಶನ್ ಶುರುವಾಗಿದೆ. ಅದಕ್ಕಾಗಿ ಅನರ್ಹ ಶಾಸಕರು ದಿನಕ್ಕೊಂದು ಲೆಕ್ಕಾಚಾರ ಹಾಕ್ತಿದ್ದಾರೆ. ಉತ್ತರಾಧಿಕಾರಿಗಳನ್ನೇ ಕಣಕ್ಕಿಳಿಸೋ ಚಿಂತನೆಯಲ್ಲಿದ್ದಾರೆ. ಇದಕ್ಕೆ ಪ್ಯಾನ್ ಕೂಡ ರೆಡಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಉಪಚುನಾವಣೆಯಲ್ಲಿ ನಮಗೆ ಸ್ಪರ್ಧಿಸುವ ಅವಕಾಶ ಸಿಗದಿದ್ದರೆ, ಉತ್ತರಾಧಿಕಾರಿಗಳನ್ನು ಕಣಕ್ಕಿಳಿಸಲು ಅನರ್ಹ ಶಾಸಕರು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಅದಕ್ಕಾಗಿ ತಮ್ಮ ಅನಕೂಲಕ್ಕೆ ತಕ್ಕಂತೆ ಸಹೋದರ, ಪತ್ನಿ, ಅಳಿಯ, ಅಪ್ಪ, ಮಗ, ಪುತ್ರಿಯನ್ನೇ ಕಣಕ್ಕಿಳಿಸಲು ಅನರ್ಹ ಶಾಸಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೆಲ್ಲದರ ನಡುವೆ ಇಂದು ಅನರ್ಹ ಶಾಸಕರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನಾಳೆ ಎಲ್ಲರೂ ಒಟ್ಟಿಗೆ ಭೇಟಿಯಾಗಲಿದ್ದೇವೆ. ನಮಗೆ ಯಾವುದೇ ಆತಂಕ ಇಲ್ಲ. ಪ್ಲಾನ್ ಎ ಮತ್ತು ಪ್ಲಾನ್ ಬಿ ರೆಡಿಯಾಗಿದೆ. ನಮಗೆ ಅವಕಾಶ ಸಿಗದಿದ್ದರೆ ಕುಟುಂಬ ವರ್ಗದವರನ್ನ ಚುನಾವಣೆಗೆ ಸ್ಪರ್ಧೆ ಮಾಡಿಸುತ್ತೇವೆ ಎಂದಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಕೆ.ಸುಧಾಕರ್, ದೆಹಲಿಗೆ ತೆರಳಿ ಎಲ್ಲರೂ ನಿರ್ಧಾರ ಮಾಡುತ್ತೇವೆ. ವಕೀಲರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ ಎಂದರು. ಇತ್ತ ಮುನಿರತ್ನ ಮಾತನಾಡಿ, ನಮ್ಮ ಸ್ನೇಹಿತರು ಇಂದು ದೆಹಲಿಗೆ ತೆರಳುತ್ತಿದ್ದಾರೆ. ನಾವು ಬಿಜೆಪಿ ಸೇರಿರುವುದಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದ್ರೆ ಮತ್ತೆ ಕಾಂಗ್ರೆಸ್‍ಗೆ ಮಾತ್ರ ವಾಪಸ್ಸು ಹೋಗಲ್ಲ. ಅವರು ನಮ್ಮನ್ನು ಬೇಡ ಅಂದಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *