Monday, 17th February 2020

Recent News

ನಾನು ಕೇಳೋವಾಗ ಕೊಟ್ಟಿಲ್ಲ, ಆದ್ರೆ ಕನಕಪುರಕ್ಕೆ ಕೊಟ್ರು- ಹೆಚ್‍ಡಿಕೆ ವಿರುದ್ಧ ಸುಧಾಕರ್ ಕಿಡಿ

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅನರ್ಹ ಶಾಸಕ ಕೆ ಸುಧಾಕರ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡದ್ದು, ಮಲತಾಯಿ ಧೋರಣೆ ತಾಳಿದ್ದೇ ನಾನು ರಾಜೀನಾಮೆ ನೀಡಲು ಪ್ರಮುಖ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದರು.

14 ತಿಂಗಳು ಆಡಳಿತ ನಡೆಸಿದ ಸಮ್ಮಿಶ್ರ ಸರ್ಕಾರ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಾನು ಕುಮಾರಸ್ವಾಮಿ ಬಳಿ ಮೆಡಿಕಲ್ ಕಾಲೇಜಿಗೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಕೇಳಲು ಹೋದಾಗ ಸುಮಾರು ಒಂದೂವರೆ ಗಂಟೆ ನನ್ನನ್ನ ಕಾಯಿಸಿದರು. ನಂತರ ಹೊರಗಡೆ ಬಂದು ಹಣ ಕೊಡಲು ಆಗುವುದಿಲ್ಲ ಎಂದು ನೇರವಾಗಿ ಹೇಳಿದರು. ಆದರೆ ಅದೇ ಬಜೆಟ್‍ನಲ್ಲಿ ಕನಕಪುರ ಮೆಡಿಕಲ್ ಕಾಲೇಜು ಘೋಷಣೆ ಮಾಡಿ 450 ಕೋಟಿ ಬಿಡುಗಡೆ ಮಾಡಿದರು. ಈ ರೀತಿ ಮಲತಾಯಿ ಧೋರಣೆ ಮಾಡಿದ್ರು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ನನಗೆ ಆರು ತಿಂಗಳ ಕಾಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡದೆ ಸತಾಯಿಸಿದರು. ಆದರೆ ಕಳೆದ 2 ತಿಂಗಳ ಹಿಂದೆ ಕುಮಾರಸ್ವಾಮಿಗೆ ಸುಧಾಕರ್ ಏನು ಎಂದು ಅರ್ಥ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಹಾಗೂ ಶಿವಶಂಕರ ರೆಡ್ಡಿ ನನಗೆ ಪಿಸಿಬಿ ಸ್ಥಾನ ಕೊಡದಂತೆ ಒತ್ತಡ ಹಾಕಿದ್ದರು. ಹಾಗಾಗಿ ನಾನು ಕೊಡಲು ಆಗಲಿಲ್ಲ ನಾನು ಸಹ ತಪ್ಪು ಮಾಡಿದೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಹೇಳಿ ಪಶ್ಚಾತ್ತಾಪ ಪಟ್ಟಿದ್ದರು ಎಂದರು.

ಇತ್ತೀಚೆಗೆ ಕೂಡ ನಿನ್ನಂತಹ ಒಬ್ಬ ಶಾಸಕ ನನ್ನ ಜೊತೆ ಇದ್ದಿದ್ದರೆ ಸಾಕು 10 ಜನ ಶಾಸಕರು ಇರೋ ಬದಲು ನನ್ನ ಸರ್ಕಾರ ಉಳಿಯುತ್ತಿತ್ತು ಎಂದು ಕೂಡ ಹೇಳಿದ್ದರು. ಆದರೆ ಅಷ್ಟರಲ್ಲಿ ಎಲ್ಲವೂ ಕೈ ಮೀರಿ ಹೋಗಿತ್ತು. ಇದಿರಿಂದ ಕುಮಾರಸ್ವಾಮಿಗೆ ಸುಧಾಕರ್ ಏನು ಅಂತ ಅರ್ಥ ಆಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *