Connect with us

Chikkaballapur

ನಮ್ಮ ತ್ಯಾಗದಿಂದ ಬಿಜೆಪಿಯವರು ಅಧಿಕಾರ ಅನುಭವಿಸ್ತಿದ್ದಾರೆ: ಸುಧಾಕರ್

Published

on

– ಅನರ್ಹ ಶಾಸಕರ ಮೇಲೆ ಬಿಎಸ್‍ವೈಗೆ ಪ್ರೀತಿ
– ಮೈತ್ರಿಯಲ್ಲಿ ಗಂಡ ಹೆಂಡತಿಯನ್ನು ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ

ಚಿಕ್ಕಬಳ್ಳಾಪುರ: ನಮ್ಮ ತ್ಯಾಗದಿಂದ ಬಿಜೆಪಿಯವರು ಅಧಿಕಾರಕ್ಕೆ ಅನುಭವಿಸುತ್ತಿದ್ದಾರೆ. ಇಲ್ಲದಿದ್ದರೆ ಅವರು ಅಧಿಕಾರದಲ್ಲಿ ಇರುತ್ತಿರಲಿಲ್ಲ ಎಂದು ಅನರ್ಹ ಶಾಸಕ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಿ ಮಾತನಾಡಿದ ಸುಧಾಕರ್, ಬಿಜೆಪಿಯ ಕೆಲ ನಾಯಕರು ಅನರ್ಹ ಶಾಸಕರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ನಾವು ಯಾರನ್ನ ಮೆಚ್ಚಿಸಲು ರಾಜೀನಾಮೆ ಕೊಟ್ಟಿಲ್ಲ. ಅಂತಃಕರಣದಿಂದ ನಾವು ಈ ತೀರ್ಮಾನವನ್ನ ಕೈಗೊಂಡಿದ್ದೇವೆ. ಅವರ ಹೇಳಿಕೆಗಳನ್ನು ದೇವರು ಹಾಗೂ ಜನ ನೋಡುತ್ತಾರೆ. ಟೀಕೆ ಟಿಪ್ಪಣಿಗಳಿಗೆ ಅನರ್ಹ ಶಾಸಕರು ಯಾವುದೇ ಮಾನ್ಯತೆ ಕೊಡುವುದಿಲ್ಲ. ಡಿಸಿಎಂ ಲಕ್ಷಣ್ ಸವದಿ ಅಂತಷ್ಟೇ ಅಲ್ಲ. ಯಾರೇ ಆಗಲಿ, ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ ಅವರು ಮಾಡುವ ಪದಬಳಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ಬಿಎಸ್‍ವೈಗೆ ಧನ್ಯವಾದ: ಇದೇ ವೇಳೆ ಇದು ಚುನಾವಣಾ ಪ್ರಚಾರ ಅಲ್ಲ ಎಂದು ಸ್ಪಷ್ಟಪಡಿಸಿದ ಸುಧಾಕರ್, ನನ್ನ ಕ್ಷೇತ್ರದ ಜನರಿಗೆ ನಾನು ಏಕೆ ರಾಜೀನಾಮೆ ಕೊಟ್ಟೆ ಎಂದು ಕಾರಣ ಹೇಳಲು ಬಂದಿದ್ದೇನೆ. ಕ್ಷೇತ್ರದಲ್ಲಿ ಪ್ರತಿ ಪಂಚಾಯತಿವಾರು ಪ್ರವಾಸ ಕೈಗೊಂಡಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದು ಅಹ್ವಾನ ನೀಡಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಅನರ್ಹ ಶಾಸಕರ ಮೇಲೆ ಬಿಎಸ್‍ವೈ ಪ್ರೀತಿ ಇಟ್ಕೊಂಡಿದ್ದಾರೆ. ಆದರೆ ನಾನು ನಮ್ಮ ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಉಳಿಸಲು ಸಮ್ಮಿಶ್ರ ಸರ್ಕಾರವನ್ನು ತೆಗೆದಿದ್ದೇವೆ. ನಂಬಿಕೆ ಇಲ್ಲದ ಸರ್ಕಾರ, ನಂಬಿಕೆ ಇಲ್ಲದ ಸಂಸಾರ ಊರ್ಜಿತವಾಗಲ್ಲ. ಹೊಸ ಸರ್ಕಾರ ರಚನೆ ಆಗಿದ್ದು, ನಾವು ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂದು ರಾಜೀನಾಮೆ ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ತೆಗೆಯಬೇಕೆಂವುದು ನಮ್ಮ ಉದ್ದೇಶವಾಗಿತ್ತು. ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ರಾಜೀನಾಮೆ ಕಾರಣ ಹೇಳಲು ಜನರ ಬಳಿ ಬಂದಿದ್ದೇನೆ.

ಇದೇ ವೇಳೆ ಜನರ ಬಳಿ ನನ್ನ ಮುಂದಿನ ನಡೆ ಬಗ್ಗೆ ಹೇಳಲು ಬಂದಿದ್ದೇನೆ. ರಮೇಶ್ ಕುಮಾರ್ ತೀರ್ಪು ರಾಜಕೀಯ ದುರದ್ದೇಶದ ತೀರ್ಪು. ಸಂವಿಧಾನಬದ್ದವಾಗಿ ತೀರ್ಪು ಕೊಟ್ಟಿದ್ದರೆ ನಾವು ಅನರ್ಹರಾಗುತ್ತಿರಲಿಲ್ಲ. ಸುಪ್ರೀಂಕೋರ್ಟಿನಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ. ನ್ಯಾಯಾಲಯ ಅನರ್ಹತೆ ರದ್ದು ಮಾಡಿದರೆ ಚುನಾವಣೆ ನಡೆಯಲ್ಲ. ಶಾಸಕ ಸ್ಥಾನವನ್ನು ಮತ್ತೆ ಪಡೆಯುತ್ತೇವೆ. ಆಗ ರಾಜೀನಾಮೆ ವಿಚಾರ ಸ್ಫೀಕರ್ ಬಳಿ ಬರುತ್ತೆ. ಆಗ ಸ್ಪೀಕರ್ ಮಾತನಾಡಲಿದ್ದಾರೆ. ಅಂದು ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಚಿಕ್ಕಬಳ್ಳಾಪುರ ದಲ್ಲಿ ಒಂದು ಬಾರಿ ಗೆದ್ದವರು ಎರಡನೇ ಬಾರಿ ಗೆದ್ದಿಲ್ಲ. ಮೊದಲು 15 ಸಾವಿರ ಮತ ಲೀಡ್ ಕೊಟ್ಟ ಜನರು, 2ನೇ ಅವಧಿಗೆ 30 ಸಾವಿರ ಮತಗಳ ಲೀಡ್ ಕೊಟ್ಟರು. ಎಲ್ಲವೂ ಜನರ ಕೈಯಲ್ಲಿದೆ. ಎರಡನೇ ಬಾರಿ 5 ವರ್ಷಕ್ಕೆ ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದರೆ ನಾನು 14 ತಿಂಗಳಿಗೆ ರಾಜೀನಾಮೆ ಕೊಟ್ಟೆ. ಜೆಡಿಎಸ್ ವಿರುದ್ಧ ಗೆದ್ದ ನಾನು ಜೆಡಿಎಸ್ ನೊಂದಿಗೆ ಹೋಗುವ ಕೆಲಸ ಕಾಂಗ್ರೆಸ್ ಮಾಡಿತು. 79 ಸ್ಥಾನ ಕಾಂಗ್ರೆಸ್ ಪಡೆದರೂ ನಾವು ಸೋತೆವು. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ ಎಂದರು. ಆದರೆ ನಾವು ಅಧಿಕಾರದ ದುರಾಸೆಯಿಂದ ಜೆಡಿಎಸ್ ನವರ ಜೊತೆ ಸೇರಿದವು. ಅನೈತಿಕವಾಗಿ ಸಂಬಂಧ ಮಾಡಿಕೊಂಡೆವು. ಇದು ನನಗೆ ವೈಯುಕ್ತಿಕವಾಗಿ ಇಷ್ಟ ಇರಲಿಲ್ಲ. ಇದು ಅನೈತಿಕ ಸರ್ಕಾರ ಎಂದು ಮೊದಲು ಹೇಳಿದ್ದು ನಾನೇ. ಜನರ ತೀರ್ಪಿಗೆ ವಿರುದ್ಧವಾಗಿ ರಚನೆಯಾದ ಸರ್ಕಾರಕ್ಕೆ ಜನ ಮನ್ನಣೆನೂ ಇರಲಿಲ್ಲ. ಆಗ ರಾಜಕೀಯವಾಗಿ ಕಾಂಗ್ರೆಸ್ ಮುಗಿದು ಹೋಗುತ್ತೆ ಎಂದು ಹೇಳಿದ್ದೆ ಎಂದು ತಮ್ಮ ರಾಜೀನಾಮೆ ಹಿಂದಿನ ವಿವರಣೆಯನ್ನು ಜನರಿಗೆ ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್ ಬದ್ದ ವೈರಿಗಳು: ಜನತಾ ಪಕ್ಷ ಹುಟ್ಟಿದ್ದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ವಿರುದ್ಧವಾಗಿ, ಆದರೆ 37 ಸ್ಥಾನ ಪಡೆದ ಜೆಡಿಎಸ್ ಗೆ ಕಾಂಗ್ರೆಸ್ ಶರಣಾದರೆ ಪಕ್ಷದ ಗತಿ ಏನು? ವಿರೋಧ ಪಕ್ಷದಲ್ಲಿ ಕೂತು ರಚನಾತ್ಮಕ ಕೆಲಸ ಮಾಡಿದ್ದರೆ ಜನರಿಗೆ ಮತ್ತಷ್ಟು ಹತ್ತಿರ ಆಗುತ್ತಿದ್ದೇವು. ಆದರೆ ಆ ಕೆಲಸ ಮಾಡಲಿಲ್ಲ. ಬಳ್ಳಾರಿ ಪಾದಯಾತ್ರೆಯಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಂದು ಶಿವಶಂಕರರೆಡ್ಡಿ ಪಾದಯಾತ್ರೆ ಮಾಡಿದ್ರಾ? ಕಾಂಗ್ರೆಸ್ ಪಕ್ಷ ಕಟ್ಟಿದ್ದೀರಾ? ನಾನು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿಲ್ಲ. ಸರ್ಕಾರಚ ವಿರುದ್ಧ ಮಾತನಾಡಿ ರಾಜೀನಾಮೆ ಕೊಟ್ಟಿದ್ದೇನೆ ಎಂದರು.

ಕಾಂಗ್ರೆಸ್ ಪರವಾಗಿ ಉತ್ತಮ ಕೆಲಸ ಮಾಡಿದ್ದಕ್ಕೆ ನನ್ನನ್ನು ಅನರ್ಹ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ನಾನು ಹೊರಬಂದಿಲ್ಲ ಪಕ್ಷವೇ ನನ್ನ ಹೊರ ಹಾಕಿದೆ. ಸಮ್ಮಿಶ್ರ ಸರ್ಕಾರದಲ್ಲಿ ಚೇಳೂರು ತಾಲೂಕು ಮಾಡುತ್ತಾರೆ. ಮಂಚೇನಹಳ್ಳಿ ಯಾಕೆ ಮಾಡಿಲ್ಲ? ಶಿವಶಂಕರರೆಡ್ಡಿಯನ್ನ ಹೇಗೆ ಸಹಿಸಿಕೊಂಡಿದ್ದೀರಿ? ಒಂದೇ ತಿಂಗಳಲ್ಲಿ ಮಂಚೇನಹಳ್ಳಿ ಯನ್ನ ಹೊಸ ತಾಲೂಕು ಕೇಂದ್ರ ಮಾಡಿಸುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದರು. ಇದೇ ವೇಳೆ ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧ ಸುಧಾಕರ್ ವಾಗ್ದಾಳಿ ನಡೆಸಿದರು.

ಮಾಜಿ ಸಚಿವರ ವಿರುದ್ಧ ವಾಗ್ದಾಳಿ: ಮಾಜಿ ಸಚಿವ ಶಿವಶಂಕರರೆಡ್ಡಿ ಇಷ್ಟು ದಿನ ಗೌರಿಬಿದನೂರು ಟು ಬೆಂಗಳೂರು ನಾನ್ ಸ್ಟಾಪ್ ಆಗಿ ಓಡಾಡ್ತಿದ್ದರು. ಈಗ ಎಲ್ಲಾ ಹಳ್ಳಿಗಳಿಗೂ ಹೋಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಿವಶಂಕರರೆಡ್ಡಿಯನ್ನು ಸೋಲಿಸಲಿಲ್ಲ. ಬೇರೆ ಪಕ್ಷದವರಿಗೆ ನಾನು ಸಹಕಾರ ಕೊಡಲಿಲ್ಲ. ಆದರೆ ಶಿವಶಂಕರರೆಡ್ಡಿ ಜೆಡಿಎಸ್ ನವರ ಗೆ ಸಹಕಾರ ಕೊಟ್ಟರು ಎಂದು ಆರೋಪಿಸಿದರು. ಅಲ್ಲದೇ ಇಂತಹವರಿಂದಲೇ ಪಕ್ಷ ನಿಷ್ಠವಂತರು ಕಾಂಗ್ರೆಸ್‍ನಿಂದ ಹೊರ ಬಂದಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಒಂದು ರೂಪಾಯಿ ಹಣ ಕೊಡಲಿಲ್ಲ. ನನಗೆ ಹೆಸರು ಬಂದು ಬಿಡುತ್ತೆ ಎಂದು ಅನುದಾನ ಕೊಡಲಿಲ್ಲ. ನಾನು ರಾಜೀನಾಮೆ ಕೊಟ್ಟಿರುವ ಕಾರಣ ಹೊಸ ಸರ್ಕಾರ ಬಂದಿದೆ. ನಾನು ದುಡ್ಡಿಗಾಗಿ ಮಾರಾಟವಾಗಿಲ್ಲ. ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಹೋರಾಡಿದ್ದೇನೆ. ನನ್ನ ಜನರಿಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದೇನೆ. ಜಯಪ್ರಕಾಶ್ ನಾರಾಯಣ ರ ಆಶಯ ಎನ್ನುತ್ತಿದ್ದ ಜೆಡಿಎಸ್ ನಾಯಕರು ಏಕೆ ಈ ರೀತಿ ಮಾಡಿದ್ದೀರಿ ಎಂದು ಸುಧಾಕರ್ ಪ್ರಶ್ನಿಸಿದರು.

ಗಂಡ ಹೆಂಡತಿನ ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ. ಇದೇ ರೀತಿ ಸಮ್ಮಿಶ್ರ ಸರ್ಕಾರ ನಡೆಸಿದರು. ಆದರೆ ಹೊರಗಡೆ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದರು. ಆದರೆ ಕೊಠಡಿಯ ಒಳ ಹೋದ ಮೇಲೆ ಬೈದು ಕೊಳ್ಳುತ್ತಿದ್ದರು ಎಂದು ಸಮ್ಮಿಶ್ರ ಸರ್ಕಾರದ ನಡೆ ಬಗ್ಗೆ ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಗೂ ಟಾಂಗ್ ನೀಡಿ, ಒಬ್ಬ ರೌಡಿ ಶೀಟರ್, ಮತ್ತೊಬ್ಬ ಸಾರಾಯಿ ಮಾರುವವ. ಇಬ್ರು ಎಂಎಲ್‍ಎ ಆಗಬೇಕಂತೆ ಹುಷಾರಾಗಿರಿ ಎಂದು ಜನರಿಗೆ ಕರೆ ನೀಡಿದರು.