Connect with us

Districts

ಜೆಡಿಎಸ್‍ನ 20 ಶಾಸಕರು ರಾಜೀನಾಮೆಗೆ ಸಿದ್ಧ

Published

on

– ಕಣ್ಣೀರಿಡುತ್ತಾ ಅನರ್ಹ ಶಾಸಕ ನಾರಾಯಣಗೌಡ ಗುಡುಗು
– ಡಿಕೆಶಿ ಜೈಲಿಗೆ ಹೋಗಲು ಗೌಡರೇ ಕಾರಣ

ಮಂಡ್ಯ: ಮೈತ್ರಿ ಸರ್ಕಾರ ಉರುಳಿದ ಬಳಿಕ ದೋಸ್ತಿ ಪಕ್ಷ ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೇ ಜೆಡಿಎಸ್ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಎಲ್ಲದರ ನಡುವೆಯೇ ಜೆಡಿಎಸ್ ರೆಬೆಲ್ ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಪಕ್ಷದಲ್ಲಿ ಇಷೆಲ್ಲಾ ನಡೆಯಲು ಮಾಜಿ ಸಚಿವ ರೇವಣ್ಣ ಅವರೇ ಕಾರಣ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರ ಹೆಸರು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುವುದು ಇದರಿಂದಲೇ ಗೊತ್ತಾಗುತ್ತದೆ. ನನ್ನಂತೆ ಇನ್ನು 20 ಶಾಸಕರು ಇದ್ದು, ಈ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಲು ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ. ನಾನು ಶಾಸಕನಾಗಿದ್ದಾಗ ರೇವಣ್ಣ ಅವರ ಜೊತೆ ಕೆಲಸ ಮಾಡಿಸಿಕೊಳ್ಳಲು ಹೋಗಿದ್ದೆ. ಆಗ ನನಗೆ ದನಕ್ಕೆ ಬೈಯ್ಯುವ ಹಾಗೆ ಬೈದಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಹೋದಾಗ ಹೀಗೆ ಮಾಡಿದ್ದರು. ಅಲ್ಲದೇ ವಿಧಾನಸೌಧದಲ್ಲಿ ನನ್ನ ಬೈದ ಬಾಗಿಲು ಹಾಕಿಕೊಂಡರು. ಇದರಿಂದ ನನಗೆ ನೋವಾಗಿತ್ತು. ಮೈತ್ರಿ ಸರ್ಕಾರ ಬೀಳಲು ಮೂಲ ಕಾರಣ ರೇವಣ್ಣ ಎಂದರು.

ನಾನು ಆ ಪಕ್ಷದಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದ ಕಾರಣ ನಾನು ಈ ಸಲಹೆ ನೀಡುತ್ತಿದ್ದೇನೆ. ಜಿಟಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದಂತೆ 20 ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನ್ನ ಬಗ್ಗೆ ಹೀನಾಮಾನವಾಗಿ ಮೊನ್ನೆ ಮಾತನಾಡಿದ್ದಾರೆ. ಆದರೆ ನನಗೆ ಕಳೆದ 5 ವರ್ಷಗಳಿಂದ ನೋವು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಬಿ ಫಾರಂ ನೀಡಲು ಸಾಕಷ್ಟು ನೋವು ಕೊಟ್ಟಿದ್ದರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರು ಸೇರಿದಂತೆ ಎಚ್‍ಡಿಡಿ ಕುಟುಂಬದ ಹೆಣ್ಣು ಮಕ್ಕಳು ನನಗೆ ನೋವು ಕೊಟ್ಟಿದ್ದಾರೆ. ಈ ಎಲ್ಲಾ ನೋವು ನುಂಗಿಕೊಂಡು ಅವರೊಂದಿಗೆ ಇದ್ದೆ.

ದೇವೇಗೌಡರು ನಾನು ಒಕ್ಕಲಿಗನ ಹೊಟ್ಟೆಯಲ್ಲಿ ಹುಟ್ಟಿದ್ದೆ ತಪ್ಪಾಯಿತು. ನಾನು ಮುಸ್ಲಿಮರ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ದೇವೇಗೌಡರು ಹೇಳುತ್ತಾರೆ. ಆದರೆ ಒಂದು ಮರಿಬೇಡಿ, ನಿಮ್ಮನ್ನ ದೆಹಲಿಯಲ್ಲಿ ಕೂರಿಸಿದ್ದೇ ಒಕ್ಕಲಿಗರು. ಇದ್ದನ್ನು ನೀವೂ ಮರೆಯಬಾರದು. ನೀವು ಈ ಹೇಳಿಕೆ ನೀಡಿದ ಪ್ರತಿ ಬಾರಿ ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದ ರೀತಿ ಆಗಿದೆ ಎಂದರು.

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ್ದು, ಸಿದ್ದರಾಮಯ್ಯ ಅಥವಾ ಬಿಜೆಪಿ ಅವರು ಅಲ್ಲ. ಕಬ್ಬಿಣವನ್ನು ಕಬ್ಬಿಣವೇ ಕತ್ತರಿಸಿದೆ. ಸಮುದಾಯ ಬೆಳೆಯಬಾರದು ಎಂದು ಡಿಕೆಶಿ ಅವರಿಗೆ ಈ ರೀತಿ ಮಾಡಿದ್ದಾರೆ. ಆರು ಏಳು ವರ್ಷದಿಂದ ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಅವರ ಮೇಲೆ ಹುನ್ನಾರ ನಡೆಯುತ್ತಿತ್ತು. ಇಬ್ಬರನ್ನೂ ಜೈಲಿಗೆ ಕಳಿಸಬೇಕು ಅಂದು ಕೊಂಡಿದ್ದರು. ಈ ಕುರಿತ ಎಲ್ಲಾ ಸತ್ಯಾಂಶಗಳು ಸಮಯ ಬಂದಾಗ ಇದು ಹೊರಗೆ ಬರುತ್ತೆ ಎಂದು ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಠಿ ನಡೆಸುವ ವೇಳೆ ಭಾವನಾತ್ಮಕವಾಗಿ ಮಾತನಾಡಿದ ನಾರಾಯಣಗೌಡರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ 800 ಕೋಟಿ ರೂ. ನೀಡಲಾಗಿದೆ ಎಂದು ಬರಿ ಘೋಷಣೆ ಮಾತ್ರ ಮಾಡಿದರು. ಆದರೆ ಸಿಎಂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ನಾವು ಸಮಸ್ಯೆ ಹೇಳಿಕೊಳ್ಳಲು ಸಿಎಂ ಬಳಿ ತೆರಳಿದರೆ ಕಣ್ಣು ಹೊಡೆದು ನಾಳೆ ಬರುವಂತೆ ಹೇಳುತ್ತಿದ್ದರೇ ವಿನಃ ಸಮಸ್ಯೆ ಬಗೆಹರಿಸುತ್ತಿರಲಿಲ್ಲ. ಎಚ್‍ಡಿಕೆ ಹಾಗೂ ರೇವಣ್ಣ ಇಬ್ಬರು ಕುಟುಂಬ ಪ್ರಿಯರಾಗಿ ಅಭಿವೃದ್ಧಿಯನ್ನು ಮರೆತರು ಎಂದು ಆರೋಪಿಸಿದರು.

ಯಡಿಯೂರಪ್ಪ ಅವರು ಹೇಳಿದ ಮಾತಿಗೆ ನಡೆದುಕೊಳ್ಳುತ್ತಾರೆ. ಹೇಳಿದ ಕೆಲಸ ಮಾಡುತ್ತಾರೆ. ಇದ್ದಕ್ಕಾಗಿ ನಾನು ಯಡಿಯೂರಪ್ಪ ಅವರ ಮನೆಗೆ ಹೋಗುತ್ತಿದ್ದೇನೆ ಅಷ್ಟೇ. ಆದರೆ ನೀವು ಎಷ್ಟೇ ನೋವು ಕೊಟ್ಟರು ನಾನು ಕೆ.ಆರ್.ಪೇಟೆ ತಾಲೂಕು ಬಿಟ್ಟು ಹೋಗಲ್ಲ. ಇನ್ನೊಬ್ಬ ಮಗಳ ಮದುವೆ ಬಾಕಿ ಇದ್ದು, ಈ ಕಾರ್ಯವನ್ನು ಮಾಡಿ ಇಲ್ಲೇ ಪ್ರಾಣ ಬಿಡುತ್ತೇನೆ ಎಂದು ಭಾವುಕರಾದರು.

ಹಣ ಪಡೆದಿಲ್ಲ: ನಾನು ಬಿಜೆಪಿ ಜೊತೆ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಈ ಹಿಂದೆ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹಣ ತೆಗೆದುಕೊಂಡಿದ್ದಾರೆಯೇ ಎಂದು ಉತ್ತರಿಸಬೇಕು. ಅವರು ಆಗ ಹಣ ಪಡೆದಿದ್ದರೆ. ಈಗ ನಾನು ತಗೊಂಡ ರೀತಿಯಾಗುತ್ತದೆ. ನನಗೆ ಮಾತ್ರವಲ್ಲದೇ ಪುಟ್ಟರಾಜ ಅಣ್ಣನಿಗೂ ನೋವು ಉಂಟುಮಾಡಿದ್ದಾರೆ. ನಾನು ಹೇಳಿಕೊಳ್ಳುತ್ತಿದ್ದೇನೆ, ಅವರು ಹೇಳಿಕೊಳ್ಳುತ್ತಿಲ್ಲ. ಅವರು ಎಲ್ಲಾ ನೋವನ್ನು ನುಂಗಿಕೊಂಡು ಓಡಾಡುತ್ತಿದ್ದಾರೆ ಎಂದರು.