Tuesday, 18th February 2020

ಬಾಂಬರ್ ಆದಿತ್ಯ ರಾವ್ ಚಿತ್ರದಲ್ಲಿ ನಾಯಕರಾಗಲಿದ್ದಾರೆ ಜೋಗಿ ಪ್ರೇಮ್

ಬೆಂಗಳೂರು: ಮಂಗಳೂರು ಏರ್‌ಪೋರ್ಟ್‌ನಲ್ಲಿ ಪತ್ತೆಯಾಗಿದ್ದ ಬಾಂಬ್ ಪ್ರಕರಣ ಜನರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೀಗ ಪೊಲೀಸರು ಬಾಂಬರ್ ಆದಿತ್ಯ ರಾವ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಚಂದನವನದಲ್ಲಿ ಮಂಗಳೂರು ಬಾಂಬ್ ಪ್ರಕರಣವನ್ನು ತೆರೆ ಮೇಲೆ ತರಲು ಕೆಲಸಗಳು ಶುರುವಾಗಿವೆ.

ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘1st ರ‌್ಯಾಂಕ್ ಟೆರರಿಸ್ಟ್ ಆದಿತ್ಯ’ ಎಂಬ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಇದೀಗ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್ ಈ ಪ್ರಕರಣವನ್ನು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ನಾಯಕನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಂದ್ರಚೂಡ್ ಅವರು ಈ ಚಿತ್ರಕ್ಕೆ ‘I am ಕಲ್ಕಿ’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಪ್ರೇಮ್ ಕೆಲ ವರ್ಷಗಳ ಹಿಂದೆ ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್‍ನಲ್ಲಿ ‘ಕಲ್ಕಿ’ ಚಿತ್ರವನ್ನು ಶುರು ಮಾಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಿಲ್ಲ. ಇದೀಗ ಚಂದ್ರಚೂಡ್ ಮಂಗಳೂರು ಬಾಂಬ್ ಪ್ರಕರಣದ ಚಿತ್ರಕ್ಕೆ ಇದೇ ಹೆಸರನ್ನು ಇಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಚಂದ್ರಚೂಡ್, ನಾವು ಬಾಂಬ್ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ಮಾಡುತ್ತಿದ್ದೆವು. ಆದರೆ ಯಾವ ಕಥೆಯೂ ಕೂಡ ಫೈನಲ್ ಆಗಿರಲ್ಲಿ. ಇದೇ ವೇಳೆ ಆದಿತ್ಯ ರಾವ್ ಘಟನೆ ನಡೆಯಿತು. ಹೀಗಾಗಿ ಈ ಕಥೆಗೆ ಸೂಕ್ತವಾಗುತ್ತದೆ ಎಂದು ಮಂಗಳೂರು ಬಾಂಬ್ ಪ್ರಕರಣದ ದೃಶ್ಯ ಈ ಚಿತ್ರದಲ್ಲಿ ಇರಲಿದೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

ಸುರೇಶ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಚಂದ್ರಚೂಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರೇಮ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸಿನಿಮಾದ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪ್ರೇಮ್ ಅವರು ‘ಏಕ್ ಲವ್ ಯಾ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಚಿತ್ರತಂಡ ಮುಖ್ಯವಾಗಿರುವ ಆದಿತ್ಯ ರಾವ್ ಪಾತ್ರವನ್ನು ಯಾರು ಮಾಡಬೇಕು ಅನ್ನೋದನ್ನು ಚರ್ಚಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *