Connect with us

Cricket

ಐಪಿಎಲ್‍ನಲ್ಲಿ ಧೋನಿ ಐತಿಹಾಸಿಕ ದಾಖಲೆ- ರಾಜಸ್ಥಾನ ಗೆಲುವಿಗೆ 126 ರನ್ ಗುರಿ

Published

on

ಅಬುಧಾಬಿ: ಐಪಿಎಲ್‍ನಲ್ಲಿ ಚೆನ್ನೈ ಸೂಪಕ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದು, ಟೂರ್ನಿಯಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಇತ್ತ ಇಂದಿನ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಅಂತಿಮ 20 ಓವರ್ ಗಳಲ್ಲಿ 05 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಲಭ್ಯವಾಗಲಿಲ್ಲ. ಆರಂಭದಿಂದಲೇ ಚೆನ್ನೈ ಆಟಗಾರರ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದ ರಾಜಸ್ಥಾನ ಬೌಲರ್ ಗಳು ಎದುರಾಳಿ ತಂಡ ಭಾರೀ ಸ್ಕೋರ್ ಕಲೆಹಾಕದಂತೆ ತಡೆಯಲು ಯಶಸ್ವಿಯಾದರು. ಚೆನ್ನೈ ಪರ ಡುಪ್ಲೆಸಿಸ್ 10, ವ್ಯಾಟ್ಸನ್ 8, ಸ್ಯಾಮ್ ಕರ್ರನ್ 22 ರನ್ ಗಳಿಸಿ ನಿರಾಸೆ ಮೂಡಿಸಿದರು.

ಸಿಎಸ್‍ಕೆ ತಂಡದ ಭರವಸೆಯ ಆಟಗಾರ ರಾಯುಡು 13 ರನ್ ಗಳಿಸಿ ತಿವಾಟಿಯಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಒಂದಾದ ಧೋನಿ, ಜಡೇಜಾ ಜೋಡಿ ಅರ್ಧ ಶತಕದ ಜೊತೆಯಾಟ ನೀಡಿ ತಂಡ ರನ್ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಈ ವೇಳೆ 28 ಎಸೆತಗಳಲ್ಲಿ 28 ರನ್ ಗಳಿಸಿದ ರನೌಟ್ ಆಗುವ ಮೂಲಕ ಧೋನಿ ಪೆವಿಲಿಯನ್ ಸೇರಿದರು. ಉಳಿದಂತೆ ಜಡೇಜಾ 30 ಎಸೆತಗಳಲ್ಲಿ 35 ರನ್, ಜಾದವ್ 7 ಎಸೆತಗಳಲ್ಲಿ 4 ರನ್ ಗಳಿಸಿ ಅಜೇಯಾರಾಗಿ ಉಳಿದರು.

ಇದರೊಂದಿಗೆ ರಾಜಸ್ಥಾನ ಗೆಲುವಿಗೆ 20 ಓವರ್ ಗಳಲ್ಲಿ 125 ರನ್ ಗಳು ಬೇಕಿದೆ. ಚೆನ್ನೈ ವಿರುದ್ಧ ಉತ್ತಮ ಬೌಲಿಂಗ್ ದಾಳಿ ಮಾಡಿದ ಅರ್ಚರ್, ತ್ಯಾಗಿ, ಗೋಪಾಲ್ ಹಾಗೂ ತಿವಾಟಿಯಾ ತಲಾ 1 ವಿಕೆಟ್ ಪಡೆದರು.

2008 ರಿಂದ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಪ್ರತಿ ಆವೃತ್ತಿಯಲ್ಲಿ ಧೋನಿಯೇ ತಂಡವನ್ನು ಮುನ್ನಡೆಸಿದ್ದು, ಮೂರು ಬಾರಿ ಟೈಟಲ್ ಗೆಲುವು ಪಡೆದಿದ್ದಾರೆ. ಸದ್ಯ ಈ ಆವೃತ್ತಿಯಲ್ಲಿ ಆಡಿದ 9 ಪಂದ್ಯದಲ್ಲಿ 6ರಲ್ಲಿ ಸೋಲುಂಡಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಈ ಟೂರ್ನಿಯಲ್ಲಿ ಚೆನ್ನೈ ಪ್ಲೇ ಆಫ್ ಪ್ರವೇಶ ಮಾಡಬೇಕಿದ್ದರೆ ಉಳಿದ 5 ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ.

ಐಪಿಎಲ್ ಆರಂಭದಿಂದಲೂ ಚೆನ್ನ ಪರ ಆಡುತ್ತಿದ್ದ ಧೋನಿ 2016, 2017 ರಲ್ಲಿ ಫಿಕ್ಸಿಂಗ್ ಕಾರಣದಿಂದ ತಂಡ ನಿಷೇಧಕ್ಕೆ ಒಳಗಾದ ಕಾರಣ ಪುಣೆ ತಂಡದ ಪರ ಆಡಿದ್ದರು. ಇದುವರೆಗ ಧೋನಿ ಆಡಿರುವ 200 ಪಂದ್ಯದಲ್ಲಿ ಚೆನ್ನೈ ಪರ 4,022 ರನ್ ಗಳಿಸಿದ್ದು, ಪುಣೆ ಪರ 574 ರನ್ ಗಳಿಸಿದ್ದಾರೆ. ಅಲ್ಲದೇ ಧೋನಿ ನಾಯಕತ್ವ ವಹಿಸಿದ್ದ 169 ಪಂದ್ಯಗಳಲ್ಲಿ ಚೆನ್ನೈ 102 ರಲ್ಲಿ ಗೆಲುವು ಪಡೆದಿದೆ.

ಧೋನಿ ಬಳಿಕ ಅತೀ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿರುವ ಆಟಗಾರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದು, ಇದುವರೆಗೂ 197 ಪಂದ್ಯಗಳನ್ನಾಡಿದ್ದಾರೆ. 3 ಮತ್ತು 4ನೇ ಸ್ಥಾನಗಳಲ್ಲಿ ಕ್ರಮವಾಗಿ 193, 191 ಪಂದ್ಯಗಳೊಂದಿಗೆ ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಪಟ್ಟಿಯಲ್ಲಿ ಧೋನಿಯೇ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.

Click to comment

Leave a Reply

Your email address will not be published. Required fields are marked *