Dharwad
ಸಿದ್ದರಾಮಯ್ಯ, ಹೆಚ್ಡಿಕೆ ದೇಣಿಗೆ ಕೊಡದಿದ್ರೆ ಮಂದಿರ ನಿರ್ಮಾಣ ಕಾರ್ಯವೇನೂ ನಿಲ್ಲೋದಿಲ್ಲ: ಶೆಟ್ಟರ್

ಧಾರವಾಡ: ರಾಮಮಂದಿರಕ್ಕೆ ಹಣ ನೀಡುವುದಿಲ್ಲ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ದಾರವಡದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಕಟ್ಟಬೇಕೆನ್ನುವುದು ದೇಶದಲ್ಲಿನ ಕೋಟ್ಯಂತರ ಜನರ ಅಭಿಲಾಷೆಯಾಗಿದೆ. ನಾವು ಎಲ್ಲೆಲ್ಲಿಗೆ ಹೋಗುತ್ತಿದ್ದೇವೆಯೋ ಅಲ್ಲೆಲ್ಲಾ ಜನರು ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ದೇಣಿಗೆ ಕೊಡದಿದ್ದರೆ ಅದರ ನಿರ್ಮಾಣ ಕಾರ್ಯವೇನೂ ನಿಲ್ಲುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಬ್ಬರು ಈ ರೀತಿ ಹೇಳುತ್ತಿದ್ದಾರೆ. ಇಡೀ ದೇಶದ ಜನರ ಅಭಿಲಾಷೆ ಮಂದಿರ ಕಟ್ಟಬೇಕು ಎನ್ನುವುದಾಗಿದೆ. ಆದರೆ ಅವರು ಈ ರೀತಿ ಹೇಳುವುದರಿಂದ ಅವರ ಅಪಸ್ವರವೇ ಅವರಿಗೆ ಕಪ್ಪು ಚುಕ್ಕೆಯಾಗುತ್ತದೆ ಎಂದು ನುಡಿದರು.
ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಬೇಡಿ, ಅದು ಆರ್.ಎಸ್.ಎಸ್ ಮಂದಿರ ಎಂದಿರುವ ಪಿಎಫ್ಐ ಮುಖಂಡನ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಿಎಫ್ಐ, ಸಿದ್ದರಾಮಯ್ಯ ಇವರೆಲ್ಲಾ ಒಂದೇ ಟೀಮ್. ಹೀಗೆ ಹೇಳುವುದರಿಂದ ಅಲ್ಪಸಂಖ್ಯಾತರ ವೋಟ್ ಬರುತ್ತವೆ ಎಂದುಕೊಂಡಿದ್ದಾರೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಆರ್.ಎಸ್.ಎಸ್ ಎನ್ನುವುದು ರಾಷ್ಟ್ರಭಕ್ತಿಯ ಸಂಕೇತ, ಸಂಘವು ದೇಶವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಈ ಸಂಘ ಎಲ್ಲಾ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ಟೀಕೆ ಮಾಡಿದವರೇ ಹಾಳಾಗಿದ್ದಾರೆಯೇ ಹೊರತು ಅದರಿಂದ ಸಂಘಕ್ಕೆ ಏನೂ ಆಗಿಲ್ಲ ಎಂದರು.
ಐಎಂಎ ಪ್ರಕರಣದಲ್ಲಿ ಮಾಜಿ ಸಿಎಂಗಳ ಹೆಸರು ಕೇಳಿ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ಇನ್ನೂ ವಿಚಾರಣೆ ನಡೆದಿದೆ. ಅವರ ಹೆಸರಿದ್ದರೆ ತನಿಖೆಯಲ್ಲಿ ಹೊರಗೆ ಬರುತ್ತದೆ ಎಂದು ತಿಳಿಸಿದರು.
