Connect with us

Dharwad

ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ

Published

on

– ಮದ್ಯದಂಗಡಿ ಪಕ್ಕದಲ್ಲೇ ರೇಷನ್ ಅಂಗಡಿ
– ರಾಯಚೂರಲ್ಲಿ ಸಿಕ್ಕಸಿಕ್ಕಲ್ಲೇ ಮದ್ಯಪಾನ

ಧಾರವಾಡ/ರಾಯಚೂರು: ಇಂದು ಎಣ್ಣೆ ಅಂಗಡಿ ಮುಂದೆ ಎಲ್ಲಿ ನೋಡಿದರೂ ಉದ್ದದ್ದೂ ಕ್ಯೂ ಕಂಡುಬರುತ್ತಿದೆ. ಆದ್ರೆ ಧಾರವಾಡದಲ್ಲಿ ಒಂದೆಡೆ ಮದ್ಯದಂಗಡಿ ಇನ್ನೊಂದೆಡೆ ರೇಷನ್ ಅಂಗಡಿಗೆ ಕ್ಯೂ ಹಚ್ಚಿದ ಅಪರೂಪದ ದೃಶ್ಯಗಳು ಕಂಡುಬಂದಿವೆ.

ಧಾರವಾಡದ ತೇಜಸ್ವಿ ನಗರದಲ್ಲಿರುವ ಖಾಸಗಿ ವೈನ್ ಶಾಪ್ ಪಕ್ಕವೇ ರೇಷನ್ ಅಂಗಡಿ ಸಹ ಇರುವುದರಿಂದ ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ನಿಂತಿದ್ದರೆ, ರೇಷನ್ ಅಂಗಡಿ ಮುಂದೆ ಮಹಿಳೆಯರು ಕ್ಯೂ ಹಚ್ಚಿದ್ದಾರೆ. ಎರಡು ಅಂಗಡಿಗಳು ಅಕ್ಕಪಕ್ಕದಲ್ಲಿರುವುದರಿಂದ ಈ ಅಪರೂಪ ದೃಶ್ಯ ಕಂಡು ಬಂದಿದೆ. ಒಂದು ಕಡೆ ಮಹಿಳೆಯರು ರೇಷನ್‍ಗೆ ಕ್ಯೂ ನಿಂತರೆ, ಮತ್ತೊಂದು ಕಡೆ ಮದ್ಯ ಖರೀದಿಗೆ ಪುರುಷರು ಕ್ಯೂ ನಿಂತಿದ್ದಾರೆ.

ಇತ್ತ ರಾಯಚೂರಿನಲ್ಲಿ ಲಾಕ್‍ಡೌನ್ ಹಿನ್ನೆಲೆ ಕಂಗೆಟ್ಟಿದ್ದ ಮದ್ಯ ವ್ಯಸನಿಗಳು ಮದ್ಯದಂಗಡಿಗಳು ಆರಂಭಿಸುತ್ತಿದ್ದಂತೆ ಸಿಕ್ಕ ಸಿಕ್ಕಲ್ಲೇ ಮದ್ಯಪಾನ ಮಾಡುತ್ತಿದ್ದಾರೆ. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ಯವ್ಯಸನಿಗಳು ಎಣ್ಣೆ ಪಾರ್ಟಿ ನಡೆಸಿದ್ದಾರೆ. ಕಟ್ಟಡದ ಹಿಂಭಾಗ, ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಕೆಳಗೆ ಮದ್ಯ ಸೇವನೆ ಮಾಡುತ್ತಿದ್ದಾರೆ.

ಕ್ರೀಡಾಂಗಣದಲ್ಲಿ ನೆರಳಿರುವ ಜಾಗದಲ್ಲಿ ಅಲ್ಲಲ್ಲೇ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಮದ್ಯ ಕೇವಲ ಪಾರ್ಸಲ್ ಸಿಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯಲು ಸ್ಥಳವಿಲ್ಲದೆ ಸಿಕ್ಕಸಿಕ್ಕಲ್ಲೇ ಸೇವನೆ ಮಾಡಲು ಮುಂದಾಗಿದ್ದಾರೆ. ಸಿಎಲ್ 2 ಹಾಗೂ ಎಂಎಸ್‍ಐಎಲ್ ಮದ್ಯದಂಗಡಿಗಳಿಗೆ ಮಾತ್ರ ಅನುಮತಿಯನ್ನು ನೀಡಿರುವುದಿರಿಂದ ಮದ್ಯಸೇವನೆಗೆ ಸ್ಥಳದ ತೊಂದರೆಯಾಗಿದೆ. ಹೀಗಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ ಜೋರಾಗಿ ನಡೆದಿದೆ.

ಗ್ರೀನ್ ಝೋನಿನಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ರಾಯಚೂರು ನಗರದಲ್ಲಿ ಎಲ್ಲಿ ನೋಡಿದರೂ ಜನರ ಓಡಾಟ ಜೋರಾಗಿದೆ. ಸಂಪೂರ್ಣ ಲಾಕ್‍ಡೌನ್ ತೆಗೆದಿರುವಂತೆ ವರ್ತಿಸುತ್ತಿರುವ ಜನ ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ಬೇರೆ ಬೇರೆ ಊರುಗಳಿಗೆ ತೆರಳಲು ಜನ ಪಾಸ್‍ಗಾಗಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮುಗಿಬಿದ್ದಿದ್ದು, ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.